ಶ್ರೀರಂಗಪಟ್ಟಣ :-ಯೋಗಾಭ್ಯಾಸದಿಂದ ಅನೇಕ ರೋಗಗಳನ್ನು ದೂರವಿಡಬಹುದಾಗಿದ್ದು, ಪ್ರತಿಯೊಬ್ಬರ ಬದುಕಿನಲ್ಲೂ ಯೋಗವು ನಿರಂತರ ಅಭ್ಯಾಸವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಪಟ್ಟಣದ ಡಿ.ಎಂ.ಎಸ್ ಚಂದ್ರವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ ಉದ್ಘಾಟಿಸಿ, ಯೋಗದ ಪಿತಾಮಹ ಪತಂಜಲಿ ಮಹರ್ಷಿ ಮತ್ತು ಧನ್ವಂತರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಮುಂಚಿತವಾಗಿಯೇ ಇಂದು ಯೋಗೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿದ್ದು, ಪ್ರತಿಯೊಬ್ಬರೂ ಕೂಡ ಯೋಗದ ಬಗ್ಗೆ ಅಭಿರುಚಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕಿನ ಭಾಗವನ್ನಾಗಿಸಿಕೊಳ್ಳಬೇಕು. ಯೋಗದ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಯೋಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತ ದೇಶ ಯೋಗದಲ್ಲಿ ಇಡೀ ವಿಶ್ವಕ್ಕೆ ಗುರುವಾಗಿದೆ. ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಪ್ರಕ್ರಿಯೆಯೇ ಯೋಗವಾಗಿದೆ. ಪ್ರತಿಯೊಬ್ಬರು ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ದೇಶ ಆಧುನಿಕ,ಯಾಂತ್ರಿಕ ಹಾಗೂ ತಾಂತ್ರಿಕವಾಗಿ ಮುಂದೆ ಇದ್ದು, ಪ್ರತಿಯೊಬ್ಬರೂ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಯೋಗವನ್ನು ರೂಢಿಸಿಕೊಳ್ಳುವ ಮೂಲಕ ಒತ್ತಡವನ್ನು ದೂರ ಮಾಡಬಹುದು. ಒಳ್ಳೆಯ ಆಲೋಚನೆ ಹಾಗೂ ಒಳ್ಳೆಯ ಕಾರ್ಯಗಳನ್ನು ಮಾಡಲು ಯೋಗದಿಂದ ಮಾತ್ರ ಸಾಧ್ಯ ಎಂದರು.
ಮಾನವನ ದೇಹವನ್ನು ಹಾರ್ಡ್ ವೇರ್ ಗೆ ಹಾಗೂ ಮನಸ್ಸನ್ನು ಸಾಫ್ಟ್ ವೇರ್ ಗೆ ಹೋಲಿಸಬಹುದು. ದೇಹದ ಪ್ರತಿಯೊಂದು ಅಂಗವನ್ನು ಸರಿಪಡಿಸಲು ವೈದ್ಯರಿದ್ದಾರೆ. ಆದರೆ ಮನಸ್ಸನ್ನು ಆರೋಗ್ಯವಾಗಿರಿಸಲು ಯೋಗಭ್ಯಾಸದಿಂದ ಸಾಧ್ಯ. ಯೋಗ ಮಾಡುವುದರಿಂದ ಎಲ್ಲರೂ ಉತ್ತಮ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬಹುದು ಎಂದರು.
ಬೇಬಿಮಠ ಮತ್ತು ಚಂದ್ರವನ ಆಶ್ರಮದ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿ ಮಾತನಾಡಿ,ಯೋಗವೆಂದರೆ ತಮ್ಮ ಯೋಗ್ಯತೆಗಳನ್ನು ಹೆಚ್ಚು ಮಾಡುವ ಅಂಶ. ಯೋಗದಲ್ಲಿ ಆರೋಗ್ಯವಿದೆ, ಆರೋಗ್ಯದಿಂದ ಉತ್ತಮ ಬದುಕು ನಡೆಸಲು ಸಾಧ್ಯ. ಕೋವಿಡ್ ಸಂದರ್ಭದಲ್ಲಿ ಅನೇಕ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗ, ಪ್ರಾಣಾಯಾಮವನ್ನು ಮಾಡುವ ಮೂಲಕ ಅನೇಕ ಜನರು ಗುಣಮುಖರಾಗಿದ್ದಾರೆ ಎಂದರು.
ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವವರು ಸಾಧಕರಾಗುತ್ತಾರೆ. ಯಾರು ಯೋಗವನ್ನು ಅಳವಡಿಸಿಕೊಳ್ಳುವುದಿಲ್ಲವೋ ಅವರು ಬಾಧಕರಾಗುವರು. ಯೋಗವೆಂಬುದು ಒಂದು ಸಂಪತ್ತಾಗಿದ್ದು, ಅದನ್ನು ಯಾರು ಇಟ್ಟುಕೊಳ್ಳುತ್ತಾರೋ ಅವರು ಕಡೆಯವರೆಗೂ ಆರೋಗ್ಯದಲ್ಲಿ ಶ್ರೀಮಂತರಾಗಿರುತ್ತಾರೆ. ಯಾರು ಯೋಗದ ಸಂಪತ್ತನ್ನು ಇಟ್ಟುಕೊಳ್ಳುವುದಿಲ್ಲವೋ ಅವರು ಎಷ್ಟೇ ಹಣವಂತರಾದರೂ ಆರೋಗ್ಯದ ವಿಷಯದಲ್ಲಿ ಬಡವರಾಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮಾಡುವುದು ಉತ್ತಮ ಎಂದರು.
ಇದೇ ವೇಳೆ ಯೋಗೋತ್ಸವದ ಅತಿಥಿಗಳು ತಾಡಸನ, ಅರ್ಧ ಚಕ್ರಾಸನ, ಉದ್ದಂಡಾಸನ, ಪದ್ಮಾಸನ, ಪರ್ವಾತಾಸನ, ನಾಡಿ ಶೋಧನಾ ಪ್ರಾಣಾಯಾಮ ಯೋಗಗಳನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.
ಯೋಗೋತ್ಸವ ದಲ್ಲಿ ವಿವಿಧ ಶಾಲಾ- ಕಾಲೇಜು ವಿದ್ಯಾ ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿಗಳು ಯೋಗದಲ್ಲಿ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಜಾಥಾ ಮೆರವಣಿಗೆಯ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಹಲ್ಯಾ ಎಸ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸಿಫ್, ಮಂಡ್ಯ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀತಾಲಕ್ಷ್ಮಿ, ಮೈಸೂರಿನ ಜಿ.ಎ.ಆರ್.ಸಿ.ಯ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣ್ಣಯ್, ಶ್ರೀರಂಗಪಟ್ಟಣ ಪುರಸಭೆಯ ಮುಖ್ಯ ಅಧಿಕಾರಿ ರಾಜಣ್ಣ ಎಂ, ತ್ರಿನೇತ್ರ ಅಂತರಾಷ್ಟ್ರೀಯ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎನ್. ನಾಗೇಶ್, ಪ್ರಾಂಶುಪಾಲ ಡಾ. ಮಧುಮತಿ ಎಂ. ಎಸ್ ಇನ್ನಿತರಿದ್ದರು.