ಮಂಡ್ಯ :- ಮೈಕ್ರೋ ಫೈನಾನ್ಸ್ ಕಂಪನಿಯವರು ರೈತರಿಗೆ ಮತ್ತು ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲತಿ ಮಾಡುವ ಸಂದರ್ಭದಲ್ಲಿ ಅವರುಗಳ ಮೇಲೆ ಯಾವುದೇ ತರಹ ಕಿರುಕುಳ ಮತ್ತು ಒತ್ತಡ ನೀಡಬಾರದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಕಂಪನಿಗಳ ಸಭೆ ಯಲ್ಲಿ ಮಾತನಾಡಿ ರೈತರಿಗೆ ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲಾತಿ ಮಾಡುವಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಜನಗಳ ಮೇಲೆ ಕಿರುಕುಳ ಹಾಗೂ ಒತ್ತಡ ನೀಡುತ್ತಿರುವುದು ಕಂಡು ಬಂದಿದೆ ಇದು ಅತಿರೇಕವಾದಲ್ಲಿ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಸಾಲ ವಸೂಲತಿ ಮಾಡುವ ಮೈಕ್ರೋಪೈನಾನ್ಸ್ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಕಿರುಕುಳ ನೀಡಿದ ಮೈಕ್ರೋಪೈನಾನ್ಸ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಗಳೆಂದು ಘೋಷಿಸಿ 77 ಸಾವಿರ ರೈತರಿಗೆ ರೂ 34 ಕೋಟಿ ಹಣವನ್ನು ಬರ ಪರಿಹಾರವಾಗಿ ನೀಡಿದೆ. ಬರಗಾಲ ಇರುವ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಎರಡು ಮೂರು ತಿಂಗಳುಗಳ ಕಾಲ ಸಾಲ ಮರುಪಾವತಿಗೆ ಅವಕಾಶ ನೀಡಿ ಒತ್ತಡ ಹಾಕದಂತೆ ನೋಡಿಕೊಳ್ಳಿ ಎಂದರು.
ಬೆಳಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಸಾಲ ವಸೂಲಾತಿ ಮಾಡುವವರು ಪ್ರತಿದಿನ ಮನೆಗೆ ಭೇಟಿ ನೀಡುತ್ತಿದ್ದು, ಇದರಿಂದ ಸಾರ್ವಜನಿಕರು ತಮಗೆ ಪ್ರತಿದಿನದ ಕೆಲಸ ಮಾಡಲು ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದೆ ಎಂದು ದೂರುಗಳು ಬರುತ್ತಿದ್ದು, ಸಾಲ ವಸೂಲಾತಿಗೆ ಸರಿಯಾದ ಸಮಯ ನಿಗದಿಮಾಡಿಕೊಳ್ಳುವಂತೆ ತಿಳಿಸಿದರು.
ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೈಕ್ರೋಪೈನಾನ್ಸ್ ಗಳು ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಣಿ ಸಂಖ್ಯೆ: 18004255654, 18001021080, 011 47174410, ನ್ನು ಸಂಪರ್ಕಿಸಬಹುದು ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಎಸ್ ಎಚ್ ನಿರ್ಮಲ, ಹಾಗೂ ವಿವಿಧ ಮೈಕ್ರೋ ಫೈನಾನ್ಸ್ ನ ವ್ಯವಸ್ಥಾಪಕರು ಉಪಸ್ಥಿತರಿದ್ದರು.