ಮಂಡ್ಯ :- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ದಕ್ಕೆ ಬಂದಾಗ ಸ್ವ ಪಕ್ಷದ ನಾಯಕರ ವಿರುದ್ಧ ತಿರುಗಿ ಬೀಳುತ್ತಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ರಿಗೆ ರಾಜಕೀಯದ ಹಾದಿಯಲ್ಲಿ ಪಕ್ಷ ಮುಖ್ಯವಾಗಿರಲಿಲ್ಲ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಬಳಗ, ಸುಂಡಳ್ಳಿ ನಾಗರಾಜ್ ಅಭಿಮಾನಿ ಬಳಗ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆದು ಸ್ವಜನ ಪಕ್ಷಪಾತ ಇಲ್ಲದೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ಸ್ವಚ್ಛ ರಾಜಕಾರಣ ಮಾಡಿದ ಕೀರ್ತಿ ಇವರಿಗೆ ಸಲ್ಲಲಿದೆ ಎಂದು ಹೇಳಿದರು.
ರಾಜಕೀಯ ಜೀವನದಲ್ಲಿ ಅಂಬೇಡ್ಕರ್ ಆಶಯ ಮೈಗೂಡಿಸಿಕೊಂಡಿದ್ದ ಇವರು ಅಂಬೇಡ್ಕರ್ ರಂತೆ ಜನಸಾಮಾನ್ಯರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು, ಸಮುದಾಯದ ಹಿತ ಕಾಪಾಡಲು ಸದಾಕಾಲ ಮುಂದಿದ್ದರು ಆದರೆ ಇವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತ ರಾಗಿರಲಿಲ್ಲ ಬದಲಾಗಿ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ, ನಾಯಕತ್ವವನ್ನು ಕೊಟ್ಟವರು ಇಂಥವರು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯ, ಇವರ ಸ್ವಾಭಿಮಾನ ನಮ್ಮೆಲ್ಲರಿಗೂ ದಾರಿದೀಪ ಆಗಲಿ ಎಂದು ಆಶಿಸಿದರು.
ಯುವಕರಾಗಿದ್ದಾಗ ಬೂಸಾ ಚಳವಳಿ ನಾಯಕತ್ವ ವಹಿಸಿದ್ದ ಶ್ರೀನಿವಾಸ್ ಪ್ರಸಾದ್ ಈಗಿನವರಂತೆ ಮನೆಯಲ್ಲಿ ಇದ್ದುಕೊಂಡು ಶಾಸಕ,ಸಂಸದರಾದವರಲ್ಲ,ಬದಲಾಗಿ ಹೋರಾಟದ ಮೂಲಕ ರಾಜಕೀಯ ಸ್ಥಾನಮಾನ ಪಡೆದವರು,ಸ್ವಾಭಿಮಾನದ ಬದುಕು ಇವರದಾಗಿತ್ತು ಎಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ ಇದ್ದಾಗಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿದ್ದರು ಇವರು ನೇರ ನಿಷ್ಠರವಾದಿ, ದೇವೇಗೌಡರನ್ನು ಸಹ ಬಿಟ್ಟಿರಲಿಲ್ಲ, ಆದರೆ ಯಾರನ್ನು ವೈಯಕ್ತಿಕವಾಗಿ ದ್ವೇಷಿಸುತ್ತಿರಲಿಲ್ಲ, ತಪ್ಪು ಮಾಡಿದವರ ವಿರುದ್ಧ ಸಾತ್ವಿಕ ಸಿಟ್ಟು ಪ್ರದರ್ಶಿಸುತ್ತಿದ್ದರು, ಇವರ ಹೋರಾಟದ ಹಣತೆ ಎಲ್ಲೆಲ್ಲೋ ಬೆಳಗಲಿ ಎಂದರು.
ಬದುಕಿದ್ದಾಗ ವ್ಯಕ್ತಿಯನ್ನು ಪ್ರೀತಿಸಬೇಕು, ಅವರ ಜೊತೆ ಸಾಗಬೇಕು, ಸತ್ತಾಗ ಹೂ ಹಾಕುವ ಬದಲು ಇದ್ದಾಗ ಗೌರವ ಸಲ್ಲಬೇಕು, ರಾಜಕಾರಣಿಯಾಗಿ, ಶಾಸಕ, ಸಂಸದ, ಸಚಿವರಾಗಿ ಪ್ರಸಾದ್ ರವರ ಆಡಳಿತ ಶೈಲಿ ಎಲ್ಲರಿಗೂ ಮಾದರಿ, ಕಂದಾಯ ಸಚಿವರಾಗಿದ್ದಾಗ ಅವರು ಜಾರಿಗೊಳಿಸಿದ್ದ ಮನಸ್ವಿನಿ ಯೋಜನೆ ಅವರ ಪ್ರೀತಿಯ ಕನಸಾಗಿತ್ತು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್ ವೀರಯ್ಯ ಮಾತನಾಡಿ ಶ್ರೀನಿವಾಸ್ ಪ್ರಸಾದ್ ರವರ ಗುಣ,ನಡತೆ, ಸೇವೆ ಸ್ವಾಭಿಮಾನದ ಗಣತಿಯಾಗಿದೆ, ಅವರು ಎಂದಿಗೂ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಿದವರಲ್ಲ, ಪಕ್ಷ ರಾಜಕಾರಣ ಅವರಿಗೆ ಮುಖ್ಯವಾಗಿರಲಿಲ್ಲ, ಬದಲಾಗಿ ಸಮಾಜದ ಹಿತಕ್ಕಾಗಿ ಹಲವು ಪಕ್ಷವನ್ನು ತೊರೆದು ಬಂದಿದ್ದರು, ಬಲಿಷ್ಠ ವರ್ಗದ ವಿರುದ್ಧ ರಾಜಕಾರಣ ಮಾಡಿದವರು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಎಸ್ಸಿ ಎಸ್ಟಿ ನಿವೃತ್ತ ನೌಕರರ ಸಂಘದ ಗುರುಮೂರ್ತಿ, ಚಂದ್ರ ಹಾಸ್, ಪ್ರೊ, ಚಂದ್ರಶೇಖರ್, ಸುಂಡಳ್ಳಿ ರಾಜು,
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್, ದೇವರಾಜ್ ಅರಸು ಹಿಂದುಳಿದ ವರ್ಗ ವೇದಿಕೆ ಅಧ್ಯಕ್ಷ ಸಂದೇಶ್ ಮೈಸೂರು ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ನಗರಸಭೆ ಸದಸ್ಯ ಶ್ರೀಧರ್, ಗೆಜ್ಜಲಗೆರೆ ಗಂಗಾಧರ್ ಕೊಮ್ಮೇರಹಳ್ಳಿ ಸೀತಾರಾಮು ಇತರರಿದ್ದರು.