ಮಂಡ್ಯ :-ವಿಕೃತ ಲೈಂಗಿಕ ಸಮೂಹ ಅತ್ಯಾಚಾರ ನಡೆಸಿದ್ದಲ್ಲದೆ ಲೈಂಗಿಕ ಕ್ರಿಯೆಯನ್ನು ಸೆರೆ ಹಿಡಿದಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಬಂಧಿಸುವಂತೆ ಒತ್ತಾಯಿಸಿ ಕೃಷಿ ಕೂಲಿಕಾರರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಮಹಿಳಾ ಕೃಷಿ ಕೂಲಿಕಾರರ ಉಪ ಸಮಿತಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಆಶ್ರಯದಲ್ಲಿ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಕೃಷಿ ಕೂಲಿಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ವಿಕೃತ ಲೈಂಗಿಕ ಸಮೂಹ ಅತ್ಯಾಚಾರ ಹಗರಣ ಲೈಂಗಿಕ ಹತ್ಯಾಕಾಂಡವಾಗಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಲೈಂಗಿಕ ಕ್ರಿಯೆಗಳನ್ನು ನಡೆಸಿರುವ ಸುಮಾರು 2900 ವೀಡಿಯೋಗಳನ್ನು ಮತ್ತು ಪೋಟೋಗಳನ್ನು ಸೆರೆ ಹಿಡಿದಿಟ್ಟುಕೊಂಡಿರುವುದಂತೂ ಅತ್ಯಂತ ಖಂಡನೀಯವಾಗಿದೆ. ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು ಘನ ಘೋರ ಅಪರಾಧವಾಗಿದೆ. ಇಂತಹ ದುಸ್ಸಾಹಸವನ್ನು ಪ್ರೋತ್ಸಾಹಿಸುತ್ತಿರುವ ಅವರ ತಂದೆ, ಶಾಸಕ ಹೆಚ್ ಡಿ ರೇವಣ್ಣ ಸಹ ಕಾನೂನಾತ್ಮಕವಾಗಿ ಅಪರಾಧಿಯಾಗಿದ್ದಾರೆ.ಜಗತ್ತಿನಲ್ಲಿ ಹಿಂದೆಂದೂ ಕೇಳರಿಯದಂತಹ ಇಂತಹ ಹಗರಣವನ್ನು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಸ್ವಹಿತಾಸಕ್ತಿಗೆ ಬಳಸಸಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ಹೀನ ಕೃತ್ಯದ ಬಗ್ಗೆ ತಿಳಿದೂ ಇವರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದ ರಾಜಕೀಯ ದಿವಾಳಿಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಪತ್ತೆ ಮಾಡಿ ತಕ್ಷಣ ಬಂಧಿಸಬೇಕು. ಆತನ ವಿರುದ್ಧ ಐಟಿ,ಐಪಿಸಿ ಹಾಗೂ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು, ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ ಅವರ ಕುಟುಂಬದವರಿಗೆ ಕಿರುಕುಳ, ಪ್ರಾಣಭಯ, ತೊಂದರೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,ಎಸ್‌ಐಟಿ ತನಿಖೆಯನ್ನು ಕಾಲ ಮಿತಿಯೊಳಗೆ ಮುಗಿಸಬೇಕು ತನಿಖೆಯ ಕಾಲಮಿತಿಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಲು ಅವಕಾಶ ಕಲ್ಪಿಸಿರುವ ಕೇಂದ್ರ ಗೃಹ ಇಲಾಖೆ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಯೊಬ್ಬನ ಪರಾರಿ ಹೊಣೆಯನ್ನು ಕೇಂದ್ರ ಎನ್ ಡಿ ಎ ಸರ್ಕಾರ ಹೊಣೆ ಹೊತ್ತು ದೇಶದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಎಂ. ಪುಟ್ಟಮಾದು, ಸರೋಜಮ್ಮ, ಹನುಮೇಶ್, ಎನ್ ಸುರೇಂದ್ರ, ಅಮಾಸಯ್ಯ, ರಾಜು.ಆರ್, ರಾಮಣ್ಣ ತಳಗವಾದಿ, ಕಪನಿಗೌಡ ಸುಜ್ಜಲೂರು, ಮಲ್ಲೇಶ,ಶಿವಲಿಂಗಯ್ಯ, ನಾಗಮ್ಮ, ಅಬ್ದುಲ್ಲಾ ನೇತೃತ್ವ ವಹಿಸಿದ್ದರು.