ಮಂಡ್ಯ :- ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಿನ್ನಲೆಯಲ್ಲಿ ಶಿಕ್ಷಕ ಬಂಧುಗಳು ಮತ್ತೊಮ್ಮೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಮರಿ ತಿಬ್ಬೆಗೌಡ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ತಮ್ಮ 24 ವರ್ಷದ ಶಾಸಕ ಅವಧಿಯಲ್ಲಿ ಶಿಕ್ಷಕರ ಸಮಸ್ಯೆ ಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅಧ್ಯಯನ ನಡೆಸಿ ಸರ್ಕಾರದ ಗಮನ ಸೆಳೆಯಲು ಅನುಭವ ತಂದುಕೊಟ್ಟಿದೆ. ಈ ದಿಸೆಯಲ್ಲಿ ನಾನು ಎಂದಿಗೂ ಶಿಕ್ಷಕ ಬಂಧುಗಳನ್ನು ಕಡೆಗಣಿಸಿಲ್ಲ. ಅಪಾರವಾಗಿ ಶಿಕ್ಷಕ ಸಮುದಾಯವನ್ನು ಗೌರವಿಸಿದ್ದೇನೆ ಎಂದರು .
ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ದಾರರಿಗೆ ಸರ್ಕಾರದಲ್ಲಿ ಸದನದಲ್ಲಿ ಗೌರವ ತಂದು ಕೊಡುವ ಕೆಲಸ ಮಾಡಿದ್ದೇನೆ. ಅವರ ಚಿಂತನೆಗಳಿಗೆ ಸ್ಪಂದಿಸುವ ಮೂಲಕ ಎಲ್ಲಾ ಶಿಕ್ಷಕರ ಒಡನಾಟದಲ್ಲಿದ್ದೇನೆ ಎಂದು ತಿಳಿಸಿದರು .
ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ನಾಲ್ಕು ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆದಿದ್ದೇನೆ .ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಶಾಸಕ ಸ್ಥಾನದ 24 ವರ್ಷದ ಅವಧಿಗಿಂತ ಈ ಅವಧಿ ಮಹತ್ವಪೂರ್ಣವಾದ ಸಮಯವಾಗಿದೆ. ಹಿಂದೆ ವಿರೋಧ ಪಕ್ಷದಲ್ಲಿದ್ದೆ.ಈಗ ಆಡಳಿತ ರೂಢ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ಆಶೀರ್ವದಿಸಿದ್ದಾರೆ .ಈ ಸರ್ಕಾರ ನಾಲ್ಕು ವರ್ಷಗಳ ಅವಧಿ ಪೂರೈಸುತ್ತದೆ . ಈ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ಸಿಕ್ಕಿದೆ. ಆದಕಾರಣ ಸಮಸ್ಯೆಗಳಿಗೆ ಪರಿಹಾರ ತಂದು ಕೊಡುವ ವಿಶ್ವಾಸವಿದೆ ಎಂದರು.
ತಮ್ಮ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಲೋಕಸಭಾ ಸದಸ್ಯರು ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಮುಖ್ಯಮಂತ್ರಿಗಳು ಕಾನೂನು ಕಾಲೇಜಿನ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ರಾಜಕಾರಣ ಪ್ರವೇಶಿಸಿ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು .
ಶಿಕ್ಷಕರ ಸಮಸ್ಯೆಗಳು ಹಲವಿದ್ದು ಬಡ್ತಿ ಪಡೆದವರಿಗೆ ಕಡಿಮೆ ವೇತನ, ಖಾಸಗಿ ಅನುದಾನಿತ ಶಾಲೆಗಳಿಗೆ ಪಿಂಚಣಿ ಇಲ್ಲ ,ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ,7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗಾಗಿ ಈಗಾಗಲೇ ಒತ್ತಾಯಿಸಲಾಗಿದೆ. ಜೊತೆಗೆ ಹಳೆ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ತರುವ ಗುರಿಯು ಇದೆ ಎಂದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆಯ ಬಗ್ಗೆ ಭರವಸೆ ನೀಡಿದೆ .ಈಗ ಮುಖ್ಯಮಂತ್ರಿಗಳು ಒಂದು ಸಮಿತಿಯನ್ನು ಮಾಡಿದ್ದಾರೆ. ಆರನೇ ವೇತನ ಜಾರಿ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ .ಈಗಲೂ 7ನೇ ವೇತನ ಆಯೋಗದ ವರದಿಯನ್ನು ಜಾರಿ ಮಾಡುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದರು .
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾಸಿರಿ ಯೋಜನೆಯನ್ನು ಸಿದ್ದರಾಮಯ್ಯ ಅವರು ಜಾರಿಗೆ ತಂದು ಪ್ರತಿ ವಿದ್ಯಾರ್ಥಿಗಳಿಗೆ 1500 ನೀಡಿದ್ದಾರೆ .ಹಾಗಾಗಿ ಸುಧೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಸರ್ಕಾರದಲ್ಲಿ ಶ್ರಮಿಸಲಿದ್ದು ,ಆದ ಕಾರಣ ಶಿಕ್ಷಕ ಬಂಧುಗಳು ಮತ್ತೊಮ್ಮೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿಡಿ ಗಂಗಾಧರ್ ,ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್ ,ನಗರಸಭೆ ಸದಸ್ಯ ಶ್ರೀಧರ್ ,ಮುಖಂಡರಾದ ಶಿವಕುಮಾರ್ ಸೇರಿದಂತೆ ಇತರರಿದ್ದರು.