ಬೆಂಗಳೂರು : ಕನ್ನಡ ಚಿತ್ರರಂಗದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನ ಹೋಟೆಲ್ ನಲ್ಲಿ ಬಂದಿಸಲಾಗಿದೆ.
ನಟ ತೂಗುದೀಪ್ ದರ್ಶನ್ ರನ್ನ ಬಂದಿಸಿ ಬೆಂಗಳೂರಿಗೆ ಕರೆತರಾಲಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕನ್ನಡ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದು, ಅಭಿಮಾನಿಗಳನ್ನು ದಂಗು ಬಡಿಯುವಂತೆ ಮಾಡಿದೆ.
ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (33) ಅವರು ನಟಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು ಎಂಬ ಕಾರಣಕ್ಕಾಗಿ ದುಷ್ಕೃತ್ಯ ನಡೆದಿದೆ,
ರೇಣುಕಾ ಸ್ವಾಮಿಗೆ ಬುದ್ಧಿ ಕಲಿಸಲು ಮುಂದಾದ ನಟ ದರ್ಶನ್ ಇದಕ್ಕಾಗಿ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರಿಗೆ ಕರೆ ಮಾಡಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎನ್ನಲಾಗಿದೆ.
ಅದರಂತೆ ರೇಣುಕಾಸ್ವಾಮಿಯನ್ನು ಜೂ.8 ರಂದು ನಗರಕ್ಕೆ ಕರೆತಂದು ಅಲ್ಲಿಂದ ಕಾಮಾಕ್ಷಿಪಾಳ್ಯದ ದರ್ಶನ್ ಆಪ್ತ ವಿನಯ್ ಎಂಬುವರ ಷೆಡ್‌ನಲ್ಲಿ ಕೂಡಿಹಾಕಿ ರಾತ್ರಿ ಐದಾರು ಮಂದಿ ಸೇರಿ ಹಲ್ಲೆ ನಡೆಸಿದ್ದರು. ತಲೆ, ಕತ್ತು ಹಾಗೂ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ರಾಡ್‌ನಿಂದ ಹಲ್ಲೆ ನಡೆಸಿರುವ ಕಾರಣಕ್ಕೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ.
ನಂತರ ಶವವನ್ನು ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಸುಮನಹಳ್ಳಿಯ ಮೋರಿಯೊಂದರಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಜೂ.9ರಂದು ಬೆಳಿಗ್ಗೆ ನಾಯಿ ಶವವನ್ನು ಎಳೆದಾಡುತ್ತಿದ್ದಾಗ ಸಮೀಪದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯೊಬ್ಬರು ಸಮೀಪ ಹೋಗಿ ನೋಡಿದಾಗ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕಾಗಮಿಸಿದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಕೊಲೆಯಾದ ವ್ಯಕ್ತಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ.
ಈ ಮೊದಲು ಇದು ಆತಹತ್ಯೆ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು. ನಂತರ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೊಲೆ ಎಂಬುದು ಗೊತ್ತಾಗಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ ರೇಣುಕಾಸ್ವಾಮಿಯ ಪೂರ್ವಾಪರ ಮಾಹಿತಿಯನ್ನು ಕಲೆ ಹಾಕಿ ಅವರ ಮೊಬೈಲ್‌ನಲ್ಲಿರುವ ಕರೆಪಟ್ಟಿ ಮತ್ತು ಸಿಸಿಟಿವಿಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ ಪೊಲೀಸರು ವಿನಯ್ ಹಾಗೂ ಇತರ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಅವರು ನೀಡಿದ ಮಾಹಿತಿ ಪ್ರಕಾರ ಹಲ್ಲೆ ನಡೆಸಿದ ಐವರ ತಂಡದಲ್ಲಿ ನಟ ದರ್ಶನ್ ಕೂಡ ಇದ್ದರು ಎಂದು ಹೇಳಲಾಗಿದೆ. ಹಲವು ಆಯಾಮಗಳಲ್ಲಿ ಕೂಲಂಕುಷವಾಗಿ ಮಾಹಿತಿ ಕಲೆಹಾಕಿದಾಗ ಆರೋಪಿಗಳೊಂದಿಗೆ ನಟ ದರ್ಶನ್ ಸಹ ಸಂಪರ್ಕದಲ್ಲಿರುವುದನ್ನು ಮತ್ತು ಹಲ್ಲೆ ನಡೆಸಿದ ಸಂದರ್ಭದಲ್ಲಿ ಅವರೂ ಸಹ ಆ ತಂಡದಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಕೊಲೆಯಂತಹ ಗಂಭಿರ ಸ್ವರೂಪದ ಪ್ರಕರಣ ಆಗಿರುವುದರಿಂದ ಮಂಗಳವಾರ ಬೆಳಿಗ್ಗೆ ಮೈಸೂರಿನಲ್ಲಿ ದರ್ಶನ್‌ರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದು, ವಿಚಾರಣೆ ಕೈಗೊಂಡಿದ್ದಾರೆ.