ಮಂಡ್ಯ :-ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಗೊಳಿಸಿ ಕೂಲಿ ಕಾರ್ಮಿಕರಿಗೆ ವಾರ್ಷಿಕ 200 ದಿನ ಕೆಲಸ ನೀಡಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟ ಕೂಲಿಕಾರರು ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ಧರಣಿ ನಡೆಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರಿಗೆ ಸಮರ್ಪಕವಾಗಿ ಉದ್ಯೋಗ ನೀಡುತ್ತಿಲ್ಲ ಇದರಿಂದ ಪಂಚಾಯಿತಿಗಳಿಗೆ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೆಲಸ ಕೇಳಿದರೆ ಯಾವುದೇ ಕೆಲಸ ಇಲ್ಲ ಎಂದು ಹೇಳುತ್ತಾರೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಉದ್ದೇಶ ಪೂರ್ವಕವಾಗಿ ಕಡಿಮೆ ಕೂಲಿ ಹಣ ಹಾಕಿ ಕೆಲಸಕ್ಕೆ ಬಾರದಂತೆ ತಡೆಗಟ್ಟುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಡಿಮೆ ಕೂಲಿ ಹಾಕಿ ಕೂಲಿಕಾರರು ಕೆಲಸಕ್ಕೆ ಬಾರದಂತೆಮಾಡುತ್ತಿರುವ ವಂಚನೆಯು ನಿಲ್ಲಬೇಕು. ಬರಗಾಲದ ಹೊತ್ತಿನಲ್ಲಿ ವರ್ಷಕ್ಕೆ 200 ದಿನ ಕೆಲಸ 600 ರೂ ಕೂಲಿ ಹಣ ನೀಡಬೇಕು.ಕಳೆದ ಆರು ತಿಂಗಳಿಂದ ನೀಡದೆ ಇರುವ ಪ್ರೋತ್ಸಾಹಧನವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಎನ್.ಎಂ.ಎಂ.ಎಸ್ ಆಯಪ್ ಮೂಲಕ ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕುವುದನ್ನು ಕೈಬಿಡಬೇಕು. ಆಯಪ್ ಮೂಲಕ ಹಾಕುವ ಹಾಜರಾತಿ ಜಿ.ಪಿ.ಎಸ್ ಸ್ಥಳದಲ್ಲೇ ಓಪನ್ ಆಗುತ್ತದೆ. ಆದರೆ ಬೇರೆ ಜಾಗದಲ್ಲಿ ಓಪನ್ ಆಗುತ್ತಿಲ್ಲ. ಕೂಲಿ ಕೆಲಸ ಮಾಡುವ ಎಲ್ಲ ಸ್ಥಳಗಳಲ್ಲಿ ಓಪನ್ ಆಗುವ ರೀತಿ ಮಾಡಬೇಕು,ನೀರಾವರಿ ಇಲಾಖೆಗೆ ಬರುವ ಕೆರೆಗಳಿಗೆ ಖಾಸಗಿ ವ್ಯಕ್ತಿಗಳಿಗೆ ಜೆ.ಸಿ.ಬಿ ಮೂಲಕ ಮಣ್ಣು ತೆಗೆಯಲು ಅನುಮತಿ ನೀಡಬಾರದು.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಬಾಕಿ ಇರುವ ಸಲಕರಣ ವೆಚ್ಚವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಸೇರಿದಂತೆ ಮೂಲ ಸೌಕರ್ಯ ದೊರಕಿಸಿಕೊಡಬೇಕು. ಒಟ್ಟು ಕುಟುಂಬದಲ್ಲಿ ಇರುವ ಜಾಬ್ ಕಾರ್ಡ್ ಅನ್ನು ವಿಭಾಗವಾದ ನಂತರ ರೇಷನ್ ಕಾರ್ಡ್ ಆಧಾರದ ಮೇಲೆ ಹೊಸ ಜಾಬ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ,ರಾಣಿ, ಶೋಭಾ, ಜಯಶೀಲಾ, ಪುಟ್ಟಲಕ್ಷ್ಮಮ್ಮ, ಜಯಲಕ್ಷ್ಮಮ್ಮ, ಪ್ರೇಮಮ್ಮ, ಚಂದ್ರಮ್ಮ, ಮಂಜುಳಾ ನೇತೃತ್ವ ವಹಿಸಿದ್ದರು.