ಮಂಡ್ಯ :- ಕೆ ಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ( ಮೂಲ ಸಂಘಟನೆ ) ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿ ಆಳುವ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿದರು.
ರೈತರು ಬೆಳೆದಿರುವ ಬೆಳೆಗಳ ರಕ್ಷಣೆ ಜೊತೆಗೆ ಮುಂಗಾರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕೆ ಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು, ಅಣೆಕಟ್ಟೆ ವ್ಯಾಪ್ತಿಯ ಕೈಗಾಲುವೆಗಳ ಹೂಳು ತೆಗೆಸಿ, ಅಭಿವೃದ್ಧಿಪಡಿಸಬೇಕು ರೈತರಿಗೆ ಉಚಿತ ಬಿತ್ತನೆ ಬೀಜ ವಿತರಿಸಬೇಕು,ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ಪ್ರತಿ ಟನ್ ಗೆ ನಿಗದಿ ಮಾಡಿರುವ 3150 ಎಫ್.ಆರ್.ಪಿ ದರವನ್ನು ಪರಿಷ್ಕರಿಸಿ 4500 ರೂ ಗೆ ಹೆಚ್ಚಿಸಬೇಕು ರಾಜ್ಯ ಸರ್ಕಾರ ಕಬ್ಬಿನ ಪ್ರೋತ್ಸಾಹಧನ 500 ರೂ ಪಾವತಿಸಬೇಕು,ಉಚಿತವಾಗಿ ಕಬ್ಬು ಬಿತ್ತನೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊಬ್ಬರಿ ದರ ಇಳಿಕೆ ರೈತರು ನಷ್ಟಕ್ಕೊಳಗಾಗುತ್ತಿದ್ದು ಹಾಗಾಗಿ ಕ್ವಿಂಟಾಲ್ ಕೊಬ್ಬರಿಗೆ 18,000 ನಿಗಧಿಮಾಡಬೇಕು,ನಾಗಮಂಗಲ ತಾಲ್ಲೂಕಿನ ಕದಬಳ್ಳಿಯಲ್ಲಿ ಶಾಶ್ವತ ಕೊಬ್ಬರಿ ಕೇಂದ್ರ ತೆರೆಯಬೇಕು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಗೆ ನಿಗದಿ ಮಾಡಿರುವ 1500 ರೂ ಪ್ರೋತ್ಸಾಹ ಧನವನ್ನು ರೈತರಿಗೆ ಪಾವತಿಸಬೇಕು,ಹಾಲು ಉತ್ಪಾದಕರ ಸಂಘಗಳಿಗೆ ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ 50 ರೂ ದರ ನಿಗದಿಪಡಿಸಬೇಕು, ಕಳೆದ ಹತ್ತು ತಿಂಗಳಿಂದ ರೈತರಿಗೆ ಪಾವತಿಸದ ಹಾಲಿನ ಬಾಕಿ ಪ್ರೋತ್ಸಾಹ ಧನ ರೂ. 1150 ಕೋಟಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ವರ್ಷಗಳಿಂದ ರೇಷ್ಮೆ ಬೆಳೆಗೆ ವೈಜ್ಞಾನಿಕ ಬೆಲೆ ದೊರಕದೆ ರೇಷ್ಮೆ ಸಾಕಾಣಿಕೆದಾರರು ಸಂಕಷ್ಟದಲ್ಲಿದ್ದು, ರೇಷ್ಮೆ ಗೂಡಿನ ದರವನ್ನು 600-700 ಗಳ ಸ್ಥಿರ ಧಾರಣೆ ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು ಮತ್ತು ರೇಷ್ಮೆ ಬೆಳೆಗಾರರಿಗೆ ಸೂಕ್ತ ವೈಜ್ಞಾನಿಕ ಬೆಲೆ ಮತ್ತು ಪ್ರೋತ್ಸಾಹಧನ ವಿತರಣೆಗೆ ಕ್ರಮವಹಿಸಬೇಕು,ಫಸಲು ಭೀಮ ಯೋಜನೆಯಡಿಯಲ್ಲಿ ರಾಗಿ ಬೆಳೆ ರೈತರಿಗೆ ವಿಮಾ ಹಣ ಪಾವತಿಸಬೇಕು.ಇತರ ಬೆಳೆಗಳಾದ ಕಬ್ಬು, ಭತ್ತ, ಜೋಳ, ತರಕಾರಿ ಬೆಳೆಗೂ ಸಹ ವಿಮೆಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಕೆ.ಆರ್.ಎಸ್. ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಕನ್ನಂಬಾಡಿ ಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನ್ಯಾಯಾಲಯ ಗಣಿಗಾರಿಕೆ ಮತ್ತು ಸ್ಫೋಟಕವನ್ನು ನಿಷೇಧಿಸಿದ್ದು, ಗಣಿ ಮಾಲೀಕರ ಲಾಭಿಗೆ ಮಣಿದಿರುವ ನೀರಾವರಿ ಇಲಾಖೆಯ ಅಧಿಕಾರಿಗಳು ತಜ್ಞರಿಂದ ಟ್ರಯಲ್ ಬ್ಲಾಸ್ಟಿಂಗ್ಗೆ ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯವನ್ನು ಕೋರಿದ್ದು, ಸರ್ಕಾರ ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳ ಮನವಿಯನ್ನು ಹಿಂಪಡೆಯಲು ಮುಂದಾಗಬೇಕು,ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಇಂಡವಾಳು ಚಂದ್ರಶೇಖರ್,ಕೆ ನಾಗೇಂದ್ರ ಸ್ವಾಮಿ, ಕೆ ರಾಮಲಿಂಗೇಗೌಡ,ಎಸ್. ಮಂಜೇಶ್ ಗೌಡ, ಸೊಳ್ಳೆಪುರ ಪ್ರಕಾಶ್,ಎಚ್ ಜೆ ಪ್ರಭುಲಿಂಗು, ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ,ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜ್,ಕೆ ಪಿ ಪುಟ್ಟಸ್ವಾಮಿ, ಕೆ.ಜೆ ಮಹೇಶ್,ದೊಡ್ಡಘಟ್ಟ ಸುರೇಶ್,ದೇವಿ ಪುರ ಬಸವರಾಜ್ ನೇತೃತ್ವ ವಹಿಸಿದ್ದರು.