ಮಂಡ್ಯ :- ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಹರಿಸಲು ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ರೈತರ ಜೊತೆಗೂಡಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯದಲ್ಲಿ ರಸ್ತೆ ತಡೆ ನಡೆಸಿದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಕನ್ನಡಪರ, ಪ್ರಗತಿಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪ್ರತಿ ಬಾರಿ ಸಮಿತಿಯು ಕಾವೇರಿ ಕೊಳ್ಳದ ರೈತರಿಗೆ ಮರಣ ಶಾಸನ ಬರೆದು ರೈತರ ಬಾಳಿಗೆ ಬೆಂಕಿ ಇಡುತ್ತಿದೆ ಎಂದು ಕಿಡಿಕಾರದರು.
ಕಳೆದ ವರ್ಷ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿ ಕೃಷ್ಣರಾಜಸಾಗರ ಜಲಾಶಯ ಭರ್ತಿ ಯಾಗಲಿಲ್ಲ ಇದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ, ಈಗಲೂ ಸಹ ಎರಡನೇ ಬೆಳೆ ಹಾಕಿಲ್ಲ, ಇದ್ದ ನೀರನ್ನು ಎಲ್ಲ ತಮಿಳುನಾಡಿಗೆ ನಿರಂತರವಾಗಿ ಹರಿಸಲಾಯಿತು ಇದೀಗ ಜಲಾಶಯಕ್ಕೆ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದ್ದು, ಬೆಳೆ ಬೆಳೆಯಲು ನೀರು ನೀಡಿಲ್ಲ ಕೇವಲ ಕೆರೆ ಕಟ್ಟೆಗಳಿಗೆ ಮಾತ್ರ ನೀರು ಹರಿಸಲಾಗಿದೆ, ಇಂತಹ ಪರಿಸ್ಥಿತಿ ಇರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಬಿಡಲು ಆದೇಶ ಮಾಡಿರುವುದು ಅವೈಜ್ಞಾನಿಕ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸಮಿತಿಯ ಆದೇಶವನ್ನು ಪಾಲನೆ ಮಾಡಬಾರದು,ಜಲಾಶಯದಲ್ಲಿ 26 ಟಿಎಂಸಿ ನೀರು ಸಂಗ್ರಹವಾಗಿದೆ, ನೆರೆ ರಾಜ್ಯಕ್ಕೆ 19 ಟಿಎಂಸಿ ನೀರು ಬಿಟ್ಟರೆ ಕಾವೇರಿ ಕೊಳ್ಳದ ರೈತರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ರಿಗೆ ವಾಸ್ತವ ಪರಿಸ್ಥಿತಿ ಗೊತ್ತಿದೆ, ಇಲ್ಲಿನ ರೈತರ ಬವಣೆಯನ್ನು ಕಣ್ಣಾರೆ ಕಂಡಿದ್ದಾರೆ ರೈತರು ಬೆಳೆ ಹಾಕದ ಪರಿಸ್ಥಿತಿಯಲ್ಲಿದ್ದಾರೆ ಆ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ರೈತರಿಗೆ ಸಂಕಷ್ಟ ಪರಿಸ್ಥಿತಿಯಲ್ಲಿ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ ಟಿ ಶ್ರೀಕಂಠೇಗೌಡ ಮಾತನಾಡಿ ಕರ್ನಾಟಕದ ಕಾವೇರಿ ಕೊಳ್ಳ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರನ್ನು ಜು.31ರವರೆಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಮಾಡಿರುವುದು ಆವೈಜ್ಞಾನಿಕ, ಬರಗಾಲದ ಹಿನ್ನೆಲೆಯಲ್ಲಿ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ, ಈಗಲೂ ಬೆಳೆ ಬೆಳೆಯುವ ಪರಿಸ್ಥಿತಿಯಲ್ಲಿ ಇಲ್ಲ, ಜಲಾಶಯಗಳು ಭರ್ತಿಯಾಗಿಲ್ಲ,ಆದರೂ ಸಹ ನೀರು ಹರಿಸಿ ಎಂದು ಆದೇಶ ಮಾಡಿರುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇಂತಹ ರೈತ ವಿರೋಧಿ ಆದೇಶವನ್ನು ಒಪ್ಪಬಾರದು ಎಂದು ಆಗ್ರಹಿಸಿದರು.
ಅದೇ ರೀತಿ ಗೋದಾವರಿ – ಕೃಷ್ಣ – ಕಾವೇರಿ – ಪೆನ್ನಾರ್ ನದಿ ಜೋಡಣೆ ಯಿಂದ ಕರ್ನಾಟಕ ರಾಜ್ಯದ ನೀರಿನ ಪಾಲು ಕೇವಲ 2.19 ಟಿಎಂಸಿ ಆದರೆ ತೆಲಂಗಾಣ ಮಹಾರಾಷ್ಟ್ರ ರಾಜ್ಯಗಳಿಗೆ 40 ರಿಂದ 50 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ, ನದಿ ಜೋಡಣೆಯಿಂದ ಎಲ್ಲಾ ರಾಜ್ಯಕ್ಕೂ ಸಮಾನವಾದ ನೀರಿನ ಪಾಲು ದೊರಕಬೇಕು, ಆದರೆ ಇಲ್ಲಿ ಕರ್ನಾಟಕ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ ಆಗುತ್ತಿರುವುದರಿಂದ ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಒತ್ತಾಯಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್ ಸಿ ಮಂಜುನಾಥ್ ಮಾತನಾಡಿ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕದ ಕಾವೇರಿ ಕೊಳ್ಳ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ಅರಿತಿಲ್ಲ, ಪ್ರತಿ ಬಾರಿ ನೀರು ಬಿಡಿ ಎಂದು ಆದೇಶ ಮಾಡುತ್ತಲೇ ಇದೆ ಇರುವ 26 ಟಿಎಂಸಿಯಲ್ಲಿ 19 ಟಿಎಂಸಿ ನೀರು ಬಿಟ್ಟರೆ ಇಲ್ಲಿನ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಧ್ಯಪ್ರವೇಶಿಸಿ ಇಲ್ಲಿನ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಚುನಾವಣೆ ಗಾಗಿ ಚನ್ನಪಟ್ಟಣದ ಹಳ್ಳಿಯನ್ನು ಸುತ್ತುತ್ತಿದ್ದಾರೆ ಮೊದಲು ಕಾವೇರಿ ಕೊಳದ ಪ್ರದೇಶವನ್ನ ಸುತ್ತಾಡಿ ಪರಿಸ್ಥಿತಿಯನ್ನು ಅರಿಯಲಿ ಸಚಿವರಾದ ನಂತರ ಒಂದು ಬಾರಿಯೂ ಕಾವೇರಿ ಕಣಿವೆ ಪ್ರದೇಶ ಪ್ರವಾಸ ಮಾಡಿಲ್ಲ ಏತಕ್ಕಾಗಿ ಇವರಿಗೆ ನೀರಾವರಿ ಸಚಿವ ಸ್ಥಾನ ಎಂದು ಕಿಡಿಕಾರಿದರು.
ತಮಿಳುನಾಡಿಗೆ ನೀರು ಹರಿಸಿ ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ರೈತರಿಗೆ ದ್ರೋಹ ಮಾಡುವ ಮುನ್ನ ವಿಷ ಭಾಗ್ಯ ಕೊಟ್ಟು ಬಿಡಲಿ ಎಂದು ಆಕಾಶ ವ್ಯಕ್ತಪಡಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಾವೇರಿ ಕೊಳ್ಳದ ಪ್ರದೇಶದ ವಾಸ್ತವ ಸ್ಥಿತಿ ಅರಿಯಲು ಪ್ರವಾಸ ಕೈಗೊಳ್ಳಬೇಕು, ರಾಜ್ಯದ ಸಂಸದರ ಸಭೆ ಕರೆದು ಚರ್ಚಿಸಬೇಕು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್, ರೈತ ಸಂಘದ ಇಂಡು ವಾಳು ಚಂದ್ರಶೇಖರ್, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಮಲ್ಲನಾಯಕನ ಕಟ್ಟೆ ವಿಜಯ್ ಕುಮಾರ್, ಪಿ.ಜಿ ನಾಗೇಂದ್ರ, ಸತ್ಯಭಾಮ, ಗೌರಮ್ಮ, ಕಮಲಮ್ಮ,ಸಿ.ಟಿ ಮಂಜುನಾಥ್, ಎಂ ಎಲ್ ತುಳಸೀದರ್ ನೇತೃತ್ವ ವಹಿಸಿದ್ದರು.