ಮಂಡ್ಯ :- ಕೇಂದ್ರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸಿ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಖಾತ್ರಿ ಗೊಳಿಸಬೇಕು ಕನಿಷ್ಠ ಶೇ 8.5 ಇಳುವರಿಗೆ ಕಬ್ಬಿನ ಎಫ್ ಆರ್ ಪಿ ದರ ನಿಗದಿಪಡಿಸಬೇಕು, ಬರ ಪರಿಹಾರದ ತಾರತಮ್ಯ ಸರಿಪಡಿಸಿ ಎಲ್ಲಾ ರೈತರಿಗೆ ಪರಿಹಾರ ಪಾವತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ವಿರೋಧಿ 3 ಕಾಯ್ದೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು, ಕಾರ್ಮಿಕ ಕಾಯ್ದೆ ರದ್ದಿಗೆ ಮುಂದಾಗಬೇಕು, ಬ್ಯಾಂಕ್ ಮತ್ತು ವಿದ್ಯುತ್ ಖಾಸಗೀಕರಣ ಕೈಬಿಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಪಾವತಿಸಬೇಕು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ಕೃಷಿ ಪಂಪ್ ಸೆಟ್ ಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ರೈತರಿಗೆ ಅಕ್ರಮ ಸಕ್ರಮ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಸುರಕ್ಷತೆ ಹಿನ್ನೆಲೆಯಲ್ಲಿ ಜಲಾಶಯದ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು, ಯಾವುದೇ ಕಾರಣಕ್ಕೂ ಪರೀಕ್ಷಾರ್ಥ ಸ್ಫೋಟ ಮಾಡಬಾರದು, ರೈತರ ಆತ್ಮಹತ್ಯೆ ತಡೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್ ಕೆಂಪೂಗೌಡ, ಗೋವಿಂದೇಗೌಡ, ಶಿವಳ್ಳಿ ಚಂದ್ರು, ಗೋರಾಪುರ ಶಂಕರಗೌಡ, ಜಿ.ಎಸ್ ಲಿಂಗಪ್ಪಾಜಿ, ಎಸ್.ಕೆ ರವಿ ಕುಮಾರ್, ಗೂಳೂರು ರಾಮಕೃಷ್ಣ, ಜವರೇಗೌಡ, ಎಂ.ಎಸ್ ವಿಜಯ್ ಕುಮಾರ್, ಟಿ.ಎಲ್ ವಿನೋದ್ ಬಾಬು, ವೈ.ಪಿ ಮಂಜುನಾಥ್, ಲತಾ ಶಂಕರ್ ನೇತೃತ್ವ ವಹಿಸಿದ್ದರು.