ಮಂಡ್ಯ :- ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಶಾಸನ ಸಭೆಗಳಲ್ಲಿ ಮಂಡನೆ ಮಾಡಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ರಸ್ತೆಯಲ್ಲಿ ಮಲಗಿ ವಿನೂತನ ಪ್ರತಿಭಟನೆ ನಡೆಸಿದರು
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇನೆಯ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟಿಸುವ ಮೂಲಕ ಕನ್ನಡಿಗರ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ಒತ್ತಾಯಿಸಿದರು.
ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಸಂಪುಟ ಸಭೆ ಒಪ್ಪಿಗೆ ನೀಡಿದೆ, ಆದರೆ ಕೈಗಾರಿಕೋದ್ಯಮಿಗಳು ವಿರೋಧ ಮಾಡಿದ್ದರಿಂದ ಕಾಯ್ದೆ ಜಾರಿಗೆ ತಾತ್ಕಾಲಿಕವಾಗಿ ತಡೆ ನೀಡಿರುವುದು ಕನ್ನಡಿಗರಿಗೆ ಮಾಡಿದ ದ್ರೋಹವಾಗಿದೆ, ವಿಧೇಯಕವನ್ನು ಶಾಸನ ಸಭೆಗಳಲ್ಲಿ ಮಂಡಿಸಿ ಅಂಗೀಕಾರ ಪಡೆದು ಕಾಯ್ದೆ ಜಾರಿ ಮಾಡುವ ಮೂಲಕ ಕಾರ್ಪೊರೇಟ್ ವಲಯದ ಉದ್ಯಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ದೊರಕಿಸಿ ಕೊಡುವ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕು ಎಂಬುದು ಕನ್ನಡಿಗರ ಬಹುದಿನದ ಬೇಡಿಕೆಯಾಗಿದ್ದು ಇದಕ್ಕಾಗಿ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ, ಆದರೆ ಕಾರ್ಪೊರೇಟ್ ವಲಯದ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕವನ್ನು ವಿರೋಧ ಮಾಡುತ್ತಿರುವುದನ್ನು ಪ್ರತಿಭಟನಾ ನಿರತರು ಖಂಡಿಸಿದರು.
ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಆಳುವ ಸರ್ಕಾರ ಕಂಡಿದೆ, ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಆದರೆ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು,ಯಾರ ಮಾತಿಗೂ ಮನ್ನಣೆ ನೀಡಿದೆ ವಿಧೇಯಕ ವನ್ನು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಉಭಯ ಶಾಸನಸಭೆಗಳಲ್ಲಿ ಮಂಡನೆ ಮಾಡಬೇಕು, ಮೂರು ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಸರ್ವಾನು ಮತದಿಂದ ವಿಧೇಯಕ ಅನುಮೋದಿಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಏಳು ಕೋಟಿ ಕನ್ನಡಿಗರ ಸರ್ಕಾರದ ಬೆನ್ನಿಗೆ ನಿಲ್ಲಲಿದ್ದು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಹಾಗೊಮ್ಮೆ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಕಾಯ್ದೆ ಜಾರಿಗೆ ಮುಂದಾಗದಿದ್ದರೆ ರಾಜ್ಯದ ಎಲ್ಲೆಡೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್ ಸಿ ಮಂಜುನಾಥ್,ಜಿ. ಮಹಾಂತಪ್ಪ,ರಾಘವೇಂದ್ರ ಎ.ಏನ್, ಕುಮಾರ, ಕೆ.ಎಸ್ ಆತ್ಮಾನಂದ,ಅಶೋಕ್, ಇಂದುಮತಿ, ಪ್ರತಿಮಾ,ಲಕ್ಷ್ಮಿ,ರಂಜಿತ್, ಮನೋಜ್, ಪ್ರಸನ್ನ ಪಿ ನೇತೃತ್ವ ವಹಿಸಿದ್ದರು.