ನಾಗಮಂಗಲ :- ನ್ಯಾಯಬೆಲೆ ಅಂಗಡಿಯಲ್ಲಿ ಹಂಚಿಕೆ ಮಾಡಿದ್ದ ಮಣ್ಣು ಮಿಶ್ರಿತ ರಾಗಿಯನ್ನು ಪಡಿತರದಾರರು ತಿಪ್ಪೆಗೆ ಸುರಿದು ಆಕ್ರೋಶಿಸಿದ ಘಟನೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಖಧರೆ ಗ್ರಾಮದ ನ್ಯಾಯಬೆಲೆ ಅಂಗಡಿ – 66ರಲ್ಲಿ ಪಡಿತರ ಅಕ್ಕಿ ಜೊತೆ ವಿತರಣೆ ಮಾಡಿದ ರಾಗಿಯಲ್ಲಿ ಮಣ್ಣು ಮತ್ತು ಇಲ್ಲಿ ಇಕ್ಕೆ ಮಿಶ್ರಣವಾಗಿದ್ದು, ಗುಣಮಟ್ಟ ಇಲ್ಲದ ಕಳಪೆ ರಾಗಿಯನ್ನು ಪಡಿತರದಾರರಿಗೆ ಹಂಚಿಕೆ ಮಾಡಲಾಗಿತ್ತು.
ಬೊಮ್ಮನಾಯಕನಹಳ್ಳಿಯಲ್ಲಿ ಪಡಿತರದಾರರು ಒಗ್ಗೂಡಿ ಕಳಪೆ ದರ್ಜೆ ರಾಗಿಯನ್ನು ಹೊತ್ತ ಪಡಿತರದಾರರು ನ್ಯಾಯಬೆಲೆ ಅಂಗಡಿ ಮಾಲೀಕ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶಿಸಿ ಊರ ಹೊರಭಾಗದ ತಿಪ್ಪೆ ಗುಂಡಿಗೆ ರಾಗಿ ಸುರಿದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದರು
ಸುಖಧರೆ ನ್ಯಾಯಬೆಲೆ ಅಂಗಡಿಯಲ್ಲಿ ಸೀಗೆಕೊಪ್ಪಲು.ಬೊಮ್ಮನಾಯಕನಹಳ್ಳಿ,ಮಲ್ಲಸಂದ್ರ ಮಠದಭುವನಹಳ್ಳಿ. ಮಲ್ಲನಾಯಕನಹಳ್ಳಿ ಗ್ರಾಮಗಳ 586 ಪಡಿತರದಾರರು ಅನ್ನಭಾಗ್ಯ ಯೋಜನೆಯ ಫಲಾನುಭವಿಯಾಗಿದ್ದು ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದಾರೆ.
ಆದರೆ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಮಣ್ಣು ಕಲ್ಲು ಮಿಶ್ರಿತ ರಾಗಿಯನ್ನು ವಿತರಣೆ ಮಾಡಲಾಗುತ್ತಿದ್ದು ಈ ಬಗ್ಗೆ ಪ್ರಶ್ನಿಸಿದರೆ ಮಾಲೀಕ ಪಡಿತರ ಚೀಟಿದಾರರ ಜೊತೆ ಜಗಳಕ್ಕೆ ನಿಲ್ಲುತ್ತಾರೆ, ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಸಹ ಆಹಾರ ನಿರೀಕ್ಷಕರು ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ತಾಲೂಕಿನಲ್ಲಿರುವ 97 ನ್ಯಾಯಬೆಲೆ ಅಂಗಡಿಗಳಲ್ಲಿ ಶುದ್ಧವಾದ ರಾಗಿಯನ್ನು ವಿತರಣೆ ಮಾಡುತ್ತಿದ್ದು ಸುಖದರೆಯಲ್ಲಿ ಮಾತ್ರ ಕಳಪೆ ರಾಗಿ ವಿತರಣೆ ಮಾಡಲಾಗುತ್ತಿದೆ, ಆಹಾರ ಇಲಾಖೆಯವರು ಪಡಿತರ ರಾಗಿ ನಮ್ಮದಲ್ಲ, ಗೋದಾಮಿನಲ್ಲಿರುವ ರಾಗಿಯನ್ನು ಪರಿಶೀಲಿಸಿಕೊಳ್ಳಿ ಎಂದು ಹೇಳುತ್ತಿದ್ದು ಆದರೆ ಸುಖದರೆ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದರು ಸಹ ಕ್ರಮ ಜರುಗಿಸುತ್ತಿಲ್ಲ. ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮವಹಿಸಿ ಗುಣಮಟ್ಟದ ಪಡಿತರ ವಿತರಣೆಗೆ ಮುಂದಾಗಬೇಕು, ಕಲ್ಲು ಮಣ್ಣು ಮಿಶ್ರಿತ ರಾಗಿ ವಿತರಣೆ ಮಾಡಿರುವ ನಾಯ ಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.