ಮಂಡ್ಯ :- ರೈತರ ಜೀವನಾಡಿ ಕೃಷ್ಣರಾಜಸಾಗರದಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು.
ಕಣ್ಮನ ಸೆಳೆಯುವ ಅಲಂಕೃತ ಜಲಾಶಯದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ನಾಡಿನ ಜನರ ಪರವಾಗಿ ಬಾಗಿನ ಸಮರ್ಪಿಸಿದರು.
ಅರ್ಚಕ ಭಾನುಪ್ರಕಾಶ್ ಶರ್ಮಾ ವಿಶೇಷ ಪೂಜೆ ನೆರವೇರಿಸಿದ ನಂತರ ಸಂಪುಟ ಸಹೋದ್ಯೋಗಿಗಳ ಜೊತೆ ಕಾವೇರಿ ಮಾತೆಗೆ ಪೂಜೆ ಸಮರ್ಪಿಸಿ ಮೈದುಂಬಿದ ಕಾವೇರಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಧನ್ಯತಾ ಬಾವ ಮೆರೆದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ,ಡಾ. ಹೆಚ್.ಸಿ. ಮಹದೇವಪ್ಪ, ವೆಂಕಟೇಶ್,ಶಾಸಕರಾದ ತನ್ವಿರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿ ಕುಮಾರ್ ಗಣಿಗ, ಕದಲೂರುಉದಯ್, ದರ್ಶನ್ ಧ್ರುವನಾರಾಯಣ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಇತರರಿದ್ದರು.
ಮಳೆ ಕೊರತೆ ಮತ್ತು ಬರಗಾಲದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಕೆ ಆರ್ ಎಸ್ ಭರ್ತಿಯಾಗಿರಲಿಲ್ಲ ಆದರೆ ಈ ಬಾರಿ ಆಷಾಢ ಮಾಸದಲ್ಲಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಭರ್ತಿಯಾಗಿದ್ದು ಆ ಹಿನ್ನೆಲೆಯಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ವೇಳೆ ಸಂಭ್ರಮ ಮನೆ ಮಾಡಿತ್ತು.
ಜಲಾಶಯದ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳ ಹಾರಾಟ ಭಾಷಾಭಿಮಾನದ ಜೊತೆಗೆ ಕನ್ನಡಿಗರ ಮನ ತಣಿಸಿತು, ಕಣ್ಣು ಹಾಯಿಸುವ ಉದ್ದಕ್ಕೂ ಕನ್ನಡ ಬಾವುಟ ರಾರಾಜಿಸಿದವು. ತಳಿರು ತೋರಣಗಳ ಸಿಂಗಾರ ಬಾಗಿನಕ್ಕೆ ಮೆರಗು ನೀಡಿದರೆ ಜಲಾಶಯದ ಕೆಳ ಭಾಗದಲ್ಲಿರುವ ಅಲಂಕೃತ ಕಾವೇರಿ ಮಾತೆ ಕಣ್ಮನ ಸೆಳೆಯಿತು.