ಮಂಡ್ಯ :- ಪರಿಶಿಷ್ಟರ ಕಲ್ಯಾಣಕ್ಕೆ ರೂಪಿಸಿರುವ ಎಸ್ ಸಿ ಎಸ್ ಪಿ ಹಾಗೂ ಟಿಎಸ್‌ಪಿ ಉಪ ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಪತ್ರ ರವಾನಿಸಿದರು.
ರಾಜ್ಯವನ್ನಾಳಿದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ಕಲ್ಯಾಣಕ್ಕೆ ಮೀಸಲಿರಿಸಿದ ಅನುದಾನವನ್ನು ಇತರ ಉದ್ದೇಶಕ್ಕೆ ಬಳಕೆ ಮಾಡುವ ಮೂಲಕ ಎಸ್ ಸಿ ಎಸ್ ಪಿ ಹಾಗೂ ಟಿ ಎಸ್ ಪಿ ಕಾಯ್ದೆಯ ಮೂಲ ಉದ್ದೇಶ ಬುಡ ಮೇಲು ಮಾಡಿವೆ, 2023 -24 ಮತ್ತು 2024 – 25 ನೇ ಸಾಲಿನಲ್ಲಿ 25,396 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಪರಿಶಿಷ್ಟರ ವಿರೋಧಿ ನೀತಿ ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಗ್ಯಾರೆಂಟಿ ಯೋಜನೆಗೆ ಬಳಸಿರುವ 25396 ಕೋಟಿ ಹಣವನ್ನು ಎಸ್ ಸಿ ಎಸ್ ಪಿ ಹಾಗೂ ಟಿಎಸ್ ಪಿ ಯೋಜನೆಗೆ ಹಿಂದಿರುಗಿಸಬೇಕು, ಪರಿಶಿಷ್ಟರ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆ ಸವಾಲು ಕುರಿತು ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು, ಸ್ಥಳೀಯ ಸಂಸ್ಥೆ ವಿಶೇಷ ಸಭೆಗಳಲ್ಲಿಯೂ ಚರ್ಚೆಗೆ ಮುಂದಾಗಬೇಕುಎಂದು ಒತ್ತಾಯಿಸಿದರು.
ಎಸ್ ಸಿ ಎಸ್ ಪಿ ಹಾಗೂ ಟಿ ಎಸ್ ಪಿ ಅನುದಾನ ಮತ್ತು ಅನುಷ್ಠಾನದ ಬಗ್ಗೆ ತಜ್ಞರ ಸಮಿತಿ ರಚಿಸಿ ಮೌಲ್ಯಮಾಪನ ಮಾಡಬೇಕು, ಯೋಜನೆಯನ್ನು ಪುನರ್ ರೂಪಿಸಿ ಆಯಾ ಜಿಲ್ಲೆಯ ನೈಸರ್ಗಿಕ ಸಂಪನ್ಮೂಲ ಆಧರಿಸಿ ಉದ್ಯೋಗ ಯೋಜನೆ ರೂಪಿಸಬೇಕು, ಯೋಜನೆ ಅನುಷ್ಠಾನಕ್ಕೆ ವಿಳಂಬ ಹಾಗೂ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಬೇಕು, ಯೋಜನೆ ಕುರಿತು ಪರಿಶಿಷ್ಟರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಎಸ್ ಸಿ ಎಸ್ ಪಿ, ಟಿಎಸ್‌ಪಿ ರಾಜ್ಯ ವಿಚಕ್ಷಣ ಆಯೋಗ ರಚಿಸಬೇಕು, ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕು, ಉದ್ಯೋಗ ಖಾತ್ರಿ ದಿನಗೂಲಿಯನ್ನು 600 ರೂ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ದೇವರಾಜ ಅರಸು ಟ್ರಕ್ ಟರ್ಮಿನಲ್, ವಾಲ್ಮೀಕಿ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವವರ ಆಸ್ತಿ ಮುಟ್ಟು ಗೋಲು ಹಾಕಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರ ಮೂರ್ತಿ, ಜಿಲ್ಲಾಧ್ಯಕ್ಷ ಆರ್. ಕೃಷ್ಣ, ಅಂಬೂಜಿ, ವಿಜೇಂದ್ರ ಕುಮಾರ್, ಕೆ ಎಸ್ ಶಿವಲಿಂಗಯ್ಯ, ಮಲ್ಲಿಕಾರ್ಜುನ ಸ್ವಾಮಿ, ಗಿರಿಜಮ್ಮ, ಗೋವಿಂದರಾಜು, ರಾಜೇಶ್, ಕೆ ಪರಶುರಾಮ್ ನೇತೃತ್ವ ವಹಿಸಿದ್ದರು.