ಮಂಡ್ಯ :- ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಉಪಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ರಾಜೀನಾಮೆಗೆ ಒತ್ತಾಯಿಸಿ ಮೈಸೂರಿನಿಂದ ಬೆಂಗಳೂರಿನ ವಿಧಾನಸೌಧಕ್ಕೆ ತೆರಳುತ್ತಿರುವ ಕಾಲ್ನಡಿಗೆ ಜಾಥಾ ಮಂಡ್ಯದಲ್ಲಿ ಸಾಗಿತು
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮ ವಾದ ) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಭವ್ಯವನದಲ್ಲಿರುವ ಡಾ.ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೂರನೇ ದಿನದ ಕಾಲ್ನಡಿಗೆ ಜಾಥಾ ಹೊರಟರು.
ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಸಾಗಿದ ಜಾಧಾದಲ್ಲಿ ಹೆಜ್ಜೆ ಹಾಕಿದ ಪ್ರತಿಭಟನಾ ನಿರತರು ಪರಿಶಿಷ್ಟರಿಗೆ ಮೀಸಲಿರಿಸಿದ ಎಸ್ ಸಿ ಎಸ್ ಪಿ ಟಿಎಸ್ ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಿ ತಕ್ಷಣ ಮರಳಿಸಬೇಕು, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ರನ್ನು ಸೇವೆಯಿಂದ ಅಮಾನತು ಮಾಡಬೇಕು, ಸಮುದಾಯದ ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಗೊಂದಲ ನಿವಾರಿಸಬೇಕು, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುವ ಪ್ರಬುದ್ಧ ಯೋಜನೆಯನ್ನು ಸಮರ್ಪಕರವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ವಸತಿ ಶಾಲೆ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ರದ್ದುಪಡಿಸಿ ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶ ಕಲ್ಪಿಸಬೇಕು, ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣದ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಹಗರಣದ ಜವಾಬ್ದಾರಿಯನ್ನು ಮುಖ್ಯಮಂತ್ರಿ ಹೊರಬೇಕು, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು, ಕರ್ನಾಟಕ ಬೌದ್ಧ ಧರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಬೌದ್ಧ ಧರ್ಮ ಸ್ವೀಕರಿಸಿದವರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಧರ್ಮದ ಉಲ್ಲೇಖ ಮಾಡಲು ಅವಕಾಶ ಕಲ್ಪಿಸಬೇಕು, ಪರಿಶಿಷ್ಟ ಸಮುದಾಯದ ಜನತೆಗೆ ಪ್ರತಿ ಹಳ್ಳಿಯಲ್ಲಿಯೂ ಸ್ಮಶಾನಕ್ಕೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ಡಾ. ಆರ್ ಮೋಹನ್ ರಾಜು, ರಾಜು ಎಂ ತಳವಾರ್, ಶೇಖರ್ ಹಾವಂಚೆ, ಸ್ವಪ್ನ, ಕೆ ಬಿ ರಾಜು, ಎ. ಚಿದಾನಂದ, ಜೆ ಸಿದ್ದರಾಜು ನೇತೃತ್ವ ವಹಿಸಿದ್ದರು.