ಮಂಡ್ಯ :- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ವಿರೋಧಿಸಿ ಕಾಂಗ್ರೆಸ್ ಪಕ್ಷ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಸರ್ ಎಂವಿ ಪ್ರತಿಮೆ ಎದುರು ನಡೆಸಿದ ಪ್ರತಿಭಟನಾ ಧರಣಿಯಲ್ಲಿ ತೊಲಗಲಿ ತೊಲಗಲಿ ರಾಜ್ಯಪಾಲರು ಕರ್ನಾಟಕ ಬಿಟ್ಟು ತೊಲಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಹೋಗಿ ರಾಜ್ಯಪಾಲರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿದ ಸಚಿವ ಎನ್ ಚೆಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಉದಯ್, ರವಿಕುಮಾರ್ ಗಣಿಗ, ಮಾಜಿ ಶಾಸಕರಾದ ಎಂ ಶ್ರೀನಿವಾಸ್, ಕೆ.ಬಿ ಚಂದ್ರಶೇಖರ್, ಬಿ ಸೋಮಶೇಖರ್,ಕೆಪಿಸಿಸಿ ಕಾರ್ಯದರ್ಶಿ ಶಿವಣ್ಣ,ಸಂಪಂಗಿ, ಚಿತ್ರನಟಿ ಬಾವನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್, ಕಾರ್ಯಾಧ್ಯಕ್ಷ ಎಂ ಸಿ ಚಿದಂಬರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿರುವ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ, ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ, ಯಾವುದೇ ಪ್ರಭಾವ ಬೀರಿಲ್ಲ ಆದರೂ ಸಹ ಅವರ ವಿರುದ್ಧ ಖಾಸಗಿ ದೂರು ಹಿನ್ನಲೆಯಲ್ಲಿ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಹೇಳಿದರು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ ಚುನಾಯಿತ ಜನಪ್ರತಿನಿಧಿ ಹೆಂಡತಿ ಸವಲತ್ತು ಪಡೆಯುವುದು ತಪ್ಪೆ, ಇದನ್ನು ಪ್ರಶ್ನಿಸಲು ಯಾವ ಹಕ್ಕಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗಿದೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವೀಲ್ ಚೇರ್ ನಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ರನ್ನು ಪದೇಪದೇ ಭೇಟಿಯಾಗಿದ್ದಾರೆ ಇವರೇನು ಕರ್ನಾಟಕದ ಜನರ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಹೋಗಿದ್ದರಾ ಎಂದು ಕಿಡಿಕಾರಿದರು.
ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರಭಾವ ಬೀರಿಲ್ಲ ಎಲ್ಲಿಯಾದರೂ ಅವರ ಸಹಿ ಇರುವ ಪತ್ರ, ಅಧಿಕಾರಿಗಳ ಮೇಲೆ ಒತ್ತಡ ಹಾಗೂ ದೂರವಾಣಿ ಕರೆ ಮಾಡಿರುವ ಬಗ್ಗೆ ತಿಳಿಸಲಿ ಎಂದು ಸವಾಲು ಹಾಕಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಪ್ರತಿ ಜಿಲ್ಲೆಯಲ್ಲಿ ಎನ್ ಜಿ ಓ ಸ್ಥಾಪಿಸಿ ನಿಗಮದಿಂದ ಹಣ ಬಿಡುಗಡೆಯಾಗಿದೆ ಆ ಹಣ ಟ್ರಸ್ಟ್ ಗೆ ಹೋಗಿದೆ, ಬಿಜೆಪಿ ಶಾಸಕರ ಪುತ್ರನ ಟ್ರಸ್ಟ್ ಅದಾಗಿದ್ದು ಇದರಲ್ಲಿ ಆರ್ ಎಸ್ ಎಸ್ ನವರು ಟ್ರಷ್ಟಿಗಳಾಗಿದ್ದಾರೆ, ಇವರಿಗೆ ನಾಚಿಕೆ ಇಲ್ಲದೆ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ನಾಲಿಗೆ ಹರಿಬಿಟ್ಟ ಶಾಸಕ ಎಂದು ಬೊಬ್ಬೆ ಹಾಕಿದ್ದಾರೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾರಂತೆ, ನನ್ನನ್ನು ಗಲ್ಲಿಗೇರಿಸಲಿ ದೂರಿಗೆ ಹೇದರುವವನಲ್ಲ, ಆರ್ ಎಸ್ ಎಸ್ ಚೆಡ್ಡಿಗೆ ಹೆದರಲ್ಲ. ನಮ್ಮದು ಮಂಡ್ಯ ಚಡ್ಡಿ ಎಂದು ತಿರುಗೇಟು ನೀಡಿದರು.