ಮಂಡ್ಯ :- ಕೇರಳದ ವಯನಾಡಿನಲ್ಲಿ ದುರಂತ ಸಂಭವಿಸಿರುವ ಹಿನ್ನಲೆಯಲ್ಲಿ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುನ್ನೆಚ್ಚರಿಕೆ ವಹಿಸಿ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜೈ ಕರ್ನಾಟಕ ಪರಿಷತ್ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಶ್ಚಿಮ ಘಟ್ಟ ಪ್ರದೇಶ ಉಳಿವಿಗಾಗಿ ‘ಪರಿಸರಕ್ಕಾಗಿ ನಾವು’ ಪರಿಸರ ಕಾರ್ಯಕರ್ತರ ಸಂಘಟನೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿ ಪಶ್ಚಿಮ ಘಟ್ಟ ಪ್ರದೇಶ ಉಳಿವಿಗಾಗಿ ಒತ್ತಾಯಿಸಿದರು.
ಪ್ರೊ. ಮಾಧವ ಗಾಡ್ಗಿಲ್ ಸಮಿತಿ ವರದಿಯ ಅಂಶಗಳನ್ನು ಜಾರಿಗೊಳಿಸದೆ ನಿರ್ಲಕ್ಷ ವಹಿಸಿದ್ದರಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನಾಹುತಗಳು ಸಂಭವಿಸುತ್ತಿವೆ ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತು ತುರ್ತು ಕ್ರಮ ವಹಿಸಬೇಕಾಗಿದೆ, ಪ್ರೊ. ಮಾದವ ಗಾಡ್ಗಿಲ್ ವರದಿ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ವರದಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರತಿ ಪಂಚಾಯಿತಿಗೆ ತಲುಪಿಸಿ ಸ್ಥಳೀಯ ಜನರ ಜೊತೆ ಚರ್ಚಿಸಿ ವರದಿ ಅನುಷ್ಠಾನಕ್ಕೆ ಮುಂದಾಗಬೇಕು, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಯುತ್ತಿರುವ ಪರಿಸರ ಸ್ನೇಹಿ ಯಲ್ಲದ ಆರ್ಥಿಕ ಚಟುವಟಿಕೆ ಅವಲಂಬಿತರಿಗೆ ಪರ್ಯಾಯ ಜೀವನೋಪಾಯ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು, ಕರಾವಳಿ ನಿಯಂತ್ರಿತ ವಲಯ ಮಾದರಿಯಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ನದಿತಟಕ ನಿಯಂತ್ರಿತ ವಲಯ ಗುರುತಿಸಿ ಪರಿಸರ ವಿರೋಧಿ ಚಟುವಟಿಕೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.
ಸೂಕ್ಷ್ಮ ಪ್ರದೇಶದಲ್ಲಿ ಪ್ರವಾಸೋದ್ಯಮ ನಿಷೇಧಿಸಬೇಕು, ಪಂಚಾಯಿತಿ,ಹೋಬಳಿ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪರಿಸರ ಜೀವ ವೈವಿಧ್ಯ ಸಂರಕ್ಷಣ ಪಡೆ ರಚಿಸಿ ಪ್ರತಿ ಪಂಚಾಯತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಮಾಡಬೇಕು, ರಾಜ್ಯ ಮತ್ತು ಜಿಲ್ಲಾಮಟ್ಟದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರಿಸರ ವಿಜ್ಞಾನಿ, ಸರ್ಕಾರೇತರ ಸದಸ್ಯ, ಶಾಸಕರು ಹಾಗೂ ಪತ್ರಕರ್ತರನ್ನು ನೇಮಿಸಬೇಕು,ಕೃಷಿ ಅರಣ್ಯ ಹಾಗೂ ಚೌಗು ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ತಡೆಯಬೇಕು, ಗುಡ್ಡ ಕುಸಿದಿರುವ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸೂಕ್ಷ್ಮ ವಲಯದಲ್ಲಿ ಕಿರು ಯೋಜನೆಯನ್ನು ಇಐಎ ಮಾಡದೆ, ಪರಿಸರ ತಜ್ಞರ ಸಮಿತಿ ಒಪ್ಪಿಗೆ ಇಲ್ಲದೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಮಾಡಬಾರದು, ಮರ ಬೆಳೆಸುವವರು, ಉಳಿಸುವವರು, ಏಕ ಬೆಳೆಯ ನೆಡುತೋಪಿನಲ್ಲಿ ಜೀವ ವೈವಿಧ್ಯ ಸ್ಥಾಪಿಸುವವರಿಗೆ ಪ್ರೋತ್ಸಾಹ ಧನ ನೀಡುವ ನೀತಿ ರೂಪಿಸಬೇಕು, ಪಶ್ಚಿಮ ಘಟ್ಟ ಪರಿಸರದ ಮೇಲೆ ಒತ್ತಡ ಬೀಳದಂತೆ ಬೇರೆ ಪ್ರದೇಶದಲ್ಲಿ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು, ಹಾನಿಯಾಗಿರುವ ಬೆಟ್ಟಗುಡ್ಡದ ಪ್ರದೇಶದಲ್ಲಿ ತುರ್ತಾಗಿ ಹಸಿರು ಹೊದಿಕೆ ಬೆಳೆಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಎಸ್ ನಾರಾಯಣ್, ಬಸವರಾಜು ಕೆ, ಪ್ರಸಾದ್ ಕೆ. ಆರ್, ಕೆಂಪೇಗೌಡ ಕೆ.ಬಿ, ಪುಟ್ಟಸ್ವಾಮಿ, ಲಲಿತಾ ರಾಜಕುಮಾರ, ಎಂ.ಪಿ ಮಮತಾ ಮೂರ್ತಿ ನೇತೃತ್ವ ವಹಿಸಿದ್ದರು.