ಮಂಡ್ಯ :- ಮೈಷುಗರ್ ವ್ಯಾಪ್ತಿಯ ಕಬ್ಬನ್ನು ತುರ್ತಾಗಿ ಕಟಾವು ಮಾಡಿಸಬೇಕು ಇಲ್ಲದಿದ್ದರೆ ಬೇರೆ ಕಾರ್ಖಾನೆ ಗಳಿಗೆ ಸರಬರಾಜು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಬೇವಿನ ಸೊಪ್ಪು ತಿನ್ನುವ ಮೂಲಕ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬಿನ ಜೊಲ್ಲೆ ಮತ್ತು ಬೇವಿನ ಸೊಪ್ಪು ಹಿಡಿದು ಪ್ರತಿಭಟಿಸಿದ ಪಕ್ಷದ ಕಾರ್ಯಕರ್ತರು ಮೈಷುಗರ್ ವ್ಯಾಪ್ತಿಯ ಕಬ್ಬನ್ನು ನಿಗದಿತ ಸಮಯದೊಳಗೆ ಕಟಾವು ಮಾಡಿಸದೆ ಜಿಲ್ಲಾಡಳಿತ ಸಿಹಿ ಬೆಳೆದ ರೈತರಿಗೆ ಕಹಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಷುಗರ್ ಕಾರ್ಖಾನೆಗೆ ಒಪ್ಪಿಗೆ ಯಾಗಿರುವ ಕಬ್ಬನ್ನು ವರ್ಷದೊಳಗೆ ಕಟಾವು ಮಾಡಿಸದೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಜಮೀನಿನಲ್ಲಿರುವ ಕಬ್ಬಿಗೆ ಈಗಾಗಲೇ 14 ರಿಂದ 15 ತಿಂಗಳು ಆಗಿದೆ, ಬೆಳೆ ಕಟಾವು ಮಾಡದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ, ಇದರಿಂದ ರೈತರಿಗೆ ಬ್ಯಾಂಕಿನಿಂದ ಆಭರಣ ಹರಾಜು ನೋಟಿಸ್ ಮತ್ತು ಬೆಳೆ ಸಾಲ ಪಾವತಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಿಸಲಾಗಿದೆ, ರೈತರು ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮೈಷುಗರ್ ಕಾರ್ಖಾನೆ ಎರಡು ಮೂರು ದಿನದೊಳಗೆ ಕಬ್ಬು ಕಟಾವು ಮಾಡಿಸಬೇಕು ಇಲ್ಲದಿದ್ದರೆ ಬೇರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಅವಕಾಶ ಮಾಡಿಕೊಡಬೇಕು, ಕಬ್ಬು ಸರಬರಾಜು ಮಾಡಲು ಅವಕಾಶ ವಾಗದೆ ಸಂಕಷ್ಟಕ್ಕೆ ಸಿಲುಕುವ ರೈತ ಆತ್ಮಹತ್ಯೆ ಮಾಡಿಕೊಂಡರೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನೇರ ಹೊಣೆ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡರಾದ ಎಸ್ ಶಿವಕುಮಾರ್ ಆರಾಧ್ಯ, ವಿವೇಕ್, ಪ್ರಸನ್ನಕುಮಾರ, ಹೊಸಳ್ಳಿ ಶಿವು, ಎಚ್ ಕೆ ಮಂಜುನಾಥ್, ಎಸ್ ಸಿ ಯೋಗೇಶ್ ನೇತೃತ್ವ ವಹಿಸಿದ್ದರು.