ಮಂಡ್ಯ :- ಕನ್ನಡ ನಾಡಿನ ಮೇಲೆ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೇಗೌಡ ಬಣ ) ಕಾರ್ಯಕರ್ತರು ಮಂಡ್ಯದಲ್ಲಿ ಹಿಂದಿ ದಿವಸ ದಂದು ಹಿಂದಿ ಭಾಷೆಯ ತಿಥಿ ದಿವಸ ಎಂದು ಆಕ್ರೋಶಿಸಿ ಪ್ರತಿಭಟಿಸಿದರು.
ನಗರದ ಅಂಚೆ ಕಚೇರಿ ಎದುರು ವೇದಿಕೆ ಕಾರ್ಯಕರ್ತರು ಹಿಂದಿ ಭಾಷೆ ತಿಥಿ ದಿವಸ ವಾಗಿದೆ ಮತ್ತೆ ಹುಟ್ಟಿ ಬರಲೇ ಬೇಡ ಎಂಬ ಬ್ಯಾನರ್ ಪ್ರದರ್ಶಿಸಿ ಕನ್ನಡಿಗರ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್, ಅಂಚೆ ಹಾಗೂ ವಿಮಾ ಕಚೇರಿಗಳ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡದೆ ನಿರ್ಲಕ್ಷ್ಯ ತೋರಿ ಹಿಂದಿ ಭಾಷೆಯಲ್ಲಿ ವ್ಯವಹರಿಸುವ ಮೂಲಕ ಒತ್ತಾಯ ಪೂರ್ವಕವಾಗಿ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿನ ಬ್ಯಾಂಕ್ ಅಂಚೆ ಹಾಗೂ ವಿಮಾ ಕಚೇರಿ ಸೇರಿ ಸಾರ್ವಜನಿಕರೊಂದಿಗೆ ನಡೆಸುವ ಯಾವುದೇ ಪತ್ರ ವ್ಯವಹಾರ,ಅರ್ಜಿ, ಚಲನ್, ಡಿಜಿಟಲ್ ಬೋರ್ಡ್, ನಾಮಫಲಕ, ಎಟಿಎಂ ಮೆಷಿನ್ , ಘೋಷಣೆ, ಎಸ್ ಎಂ ಎಸ್ ಸಂದೇಶ, ಸಾರ್ವಜನಿಕ ಪ್ರಕಟಣೆಗಳಲ್ಲಿ ಹಿಂದಿ ಭಾಷೆ ಬಳಕೆ ಮಾಡದೆ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು,ಕನ್ನಡ ತಿಳಿಯದ ಸಿಬ್ಬಂದಿಗಳನ್ನು ಕರ್ನಾಟಕದಲ್ಲಿ ಫಾರೆನ್ ನಿರ್ಮಿಸಲು ಅವಕಾಶ ನೀಡಬಾರದು, ಕನ್ನಡ ಭಾಷೆಯ ಅಸ್ತಿತ್ವಕ್ಕೆ ಮಾರಕವಾಗುವ ಹಿಂದಿ ದಿವಸ್ ಆಚರಣೆ ಮತ್ತು ಹಿಂದಿ ಕಲಿಕೆಗೆ ಪ್ರೋತ್ಸಾಹ ನೀಡುವ ಚಟುವಟಿಕೆಯನ್ನು ರಾಜ್ಯದಲ್ಲಿ ನಡೆಸಬಾರದು ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗ ಭರ್ತಿ ಗೆ ಪ್ರತ್ಯೇಕ ನಿಯಮ ರೂಪಿಸಿ ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರು ಕಟ್ಟಿ ಬೆಳೆಸಿರುವ ಬ್ಯಾಂಕ್ ಗಳನ್ನ ಉತ್ತರ ಭಾರತದ ಬ್ಯಾಂಕಗಳ ಜೊತೆ ವಿಲೀನ ಪ್ರಕ್ರಿಯೆ ಸ್ಥಗಿತ ಮಾಡಬೇಕು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳ ವಿಲೀನ ರದ್ದುಪಡಿಸಿ ಕನ್ನಡಿಗರಿಗೆ ಮರಳಿಸಬೇಕು,ಬ್ಯಾಂಕ್,ಅಂಚೆ,ವಿಮಾ ಸಂಸ್ಥೆಗಳು ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತೇವೆ, ಹಿಂದಿ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ ಎಂದು ಬಹಿರಂಗ ಪ್ರಕಟಣೆ ಮಾಡಲು ಮುಖ್ಯಮಂತ್ರಿಗಳು ಆದೇಶಸಬೇಕು, ಕನ್ನಡಿಗರ ಬೇಡಿಕೆಗಳ ಬಗ್ಗೆ ಚರ್ಚಿಸಲು ಬ್ಯಾಂಕ್, ಅಂಚೆ, ವಿಮಾ ಕಚೇರಿಗಳ ಮುಖ್ಯಸ್ಥರು, ಕನ್ನಡಪರ ಸಂಘಟನೆಗಳು, ಜನಪರ ಹೋರಾಟಗಾರರ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಹೆಚ್ ಡಿ ಜಯರಾಮ್. ಕರುನಾಡ ಸೇವಕರು ಸಂಘಟನೆಯ ಎಂ.ಬಿ ನಾಗಣ್ಣಗೌಡ, ಜೋಸೆಫ್,ಶಿವರಾಮು,ಮುದ್ದೆ ಗೌಡ, ಸುಕುಮಾರ್, ಕೃಷ್ಣೇಗೌಡ ನೇತೃತ್ವ ವಹಿಸಿದ್ದರು.