ಮಂಡ್ಯ :- ಜಾತಿ ನಿಂದನೆ, ಕೊಲೆ ಬೆದರಿಕೆ ಹಾಗೂ ಮಹಿಳೆಯರನ್ನು ನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಶಾಸಕತ್ವವನ್ನು ರದ್ದು ಮಾಡುವಂತ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮ ವಾದ ) ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದರು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ವಿಧಾನಸಭಾಧ್ಯಕ್ಷರಿಗೆ ಮನವಿ ಪತ್ರ ರವಾನಿಸಿದರು.
ಗುತ್ತಿಗೆದಾರ ಚೆಲುವರಾಜು ಜೊತೆ ನಡೆಸಿದ ಫೋನ್ ಸಂಭಾಷಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಜಾತಿ ಹೆಸರಿನಲ್ಲಿ ನಿಂದನೆ ಮಾಡಿದ್ದು, ಬೆದರಿಕೆಯೊಡ್ಡಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಪದ ಬಳಸಿ ನಿಂದನೆ ಮಾಡಿದ್ದಾರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಇವರು ಸರ್ವ ಜನಾಂಗವನ್ನು ಸಮಾನತೆಯಿಂದ ಕಂಡು ಜನರ ಸೇವೆ ಮಾಡಬೇಕಾಗಿತ್ತು ಆದರೆ ಸಂವಿಧಾನದ ಅನುಚ್ಛೇದ 14,15,16,17 ಅನ್ನು ಗೌರವಿಸದೆ ಜಾತಿ ನಿಂದನೆ ಮಾಡಿ ಅಸ್ಪೃಶ್ಯತೆ ಆಚರಿಸುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅನಾಗರಿಕವಾಗಿ ವರ್ತಿಸಿದ್ದಾರೆ,
ಸಂವಿಧಾನ ವಿರೋಧಿ ನಡೆ ತೋರಿರುವ ಶಾಸಕ ಮುನಿರತ್ನ ನಾಯ್ಡು ಶಾಸಕತ್ವವನ್ನು ರದ್ದು ಮಾಡುವ ಮೂಲಕ ದೇಶದ ಕಾನೂನಿನಲ್ಲಿ ಸರ್ವರೂ ಸಮಾನರು ಎಂಬ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಕೆ ಎಂ, ಎಸ್ ಕುಮಾರ್,ಜಿಲ್ಲಾಧ್ಯಕ್ಷ ಚನ್ನಕೇಶವ, ಬಲರಾಮ ಎಚ್ ಎನ್, ಸೋಮಶೇಖರ್ ಮೇಣಾಗರ, ಆರ್ಮುಗಂ ಬೆಳಗೊಳ, ಕುಮಾರ್. ರಮೇಶ್. ನಾಗರಾಜು ಮರಳೆಗಾಲ, ರವಿ ನರಹಳ್ಳಿ ನೇತೃತ್ವ ವಹಿಸಿದ್ದರು.