ಮಂಡ್ಯ :- ದಸರಾ ಮಹೋತ್ಸವದ ಮೂಲ ನೆಲೆ ಶ್ರೀರಂಗಪಟ್ಟಣದಲ್ಲಿ ವೈಭವಯುತ ದಸರಾ ಜಂಬೂಸವಾರಿ ಮೆರವಣಿಗೆ ಜನಾಕರ್ಷಿತು.
ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿರುವ ಕಿರಂಗೂರು ಬನ್ನಿಮಂಟಪದಲ್ಲಿ ಚಿತ್ರನಟ ಡಾ. ಶಿವರಾಜ್‌ಕುಮಾರ್ ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಜಂಬೂ ಸವಾರಿಗೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ ಮಹೇಂದ್ರ ಗಾಂಭೀರ್ಯ ದೊಂದಿಗೆ ಸಾಗಿತು ಬನ್ನಿಮಂಟಪ ದಿಂದ ಶ್ರೀರಂಗನಾಥ ಸ್ವಾಮಿ ದೇವಲಯದವರೆಗೆ ನಡೆದ ಆಕರ್ಷಕ ಮೆರವಣಿಗೆಗೆ ಕಲಾತಂಡಗಳು ಹಾಗೂ ಸ್ಥಬ್ಥಚಿತ್ರಗಳು ವಿಶೇಷ ಮೆರಗು ನೀಡಿದವು.
ವಿವಿಧ ಕಲಾ ಪ್ರಕಾರಗಳಾದ ಪೂಜಾ ಕುಣಿತ, ವೀರಗಾಸೆ, ಸೋಮನ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ತಮಟೆ ನಗಾರಿ,ನಂದಿ ದ್ವಜ, ಗಾರುಡಿ ಗೊಂಬೆ, ಚಿಲಿಪಿಲಿ ಗೊಂಬೆ,ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ ಜನಮನ ಸೂರೆಗೊಂಡವು.
ರೇಷ್ಮೆ ಇಲಾಖೆಯಿಂದ ರೇಷ್ನೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳ ಸ್ಥಬ್ದ ಚಿತ್ರ,ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ರೀರಂಗಪಟ್ಟಣ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಪಿ ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಇನ್ನಿತರಿದ್ದರು.