ಮಂಡ್ಯ: ಬೀದಿ ದೀಪ, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ನಗರ ಪ್ರದೇಶದ ವಿವಿಧ ಬಡಾವಣೆಯ ನಿವಾಸಿಗಳು ತಾಲ್ಲೂಕಿನ ಬೇಲೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯವಾದ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿ ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರೂ ಇನ್ನೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳೀಯ ಶಾಸಕರು ನಗರ ನಿವಾಸಿಗಳು ಎಂದು ನಿರ್ಲಕ್ಷ್ಯ ತೋರದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು. ಇಲ್ಲವಾದರೆ ನಿರಂತರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಎಚ್.ಆರ್.ಅಶೋಕ್ ಕುಮಾರ್ ಅವರು ಮಾತನಾಡಿ, ಬೀದಿ ದೀಪ, ಕುಡಿಯುವ ನೀರು, ಸ್ವಚ್ಚತೆ, ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯ ಕೊಡುವಲ್ಲಿ ಬೇಲೂರು ಗ್ರಾಮ ಪಂಚಾಯಿತಿ ವಿಫಲವಾಗಿದೆ. ಈಗಲಾದರೂ ತಕ್ಷಣ ಮೂಲ ಸೌಕರ್ಯ ನೀಡುವ ಮೂಲಕ ನಿವಾಸಿಗಳ ನೆರವಾಗಿ ಬರಬೇಕು. ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ಸ್ಪಂದನೆ ಸಿಗದಿದ್ದರೆ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.
ಕಾವೇರಿ ನಗರ ಹಿತರಕ್ಷಣಾ ಸಮಿತಿಯ ದೇವೇಗೌಡ, ನಾರಾಯಣಸ್ವಾಮಿ, ದೇವರಾಜು, ಮನೋಜ್, ಭಾಗ್ಯಮ್ಮ, ಚಂದ್ರಶೇಖರ್, ಅನಿಲ್‌ಕುಮಾರ್ ಸೇರಿದಂತೆ ನಿವಾಸಿಗಳು ಭಾಗವಹಿಸಿದ್ದರು.