ಮಂಡ್ಯ :- ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂವಿ ಪ್ರತಿಮೆ ಎದುರು ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ರೈತರ ಭೂಮಿ, ಮಠಮಾನ್ಯಗಳ ಹಾಗೂ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಸುತ್ತಿರುವ ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಅಕ್ರಮದ ವಿರುದ್ಧ ಕಿಡಿ ಕಾರಿದರು.
ರೈತರ ಜಮೀನು,ಮಠ ಮಾನ್ಯ ಹಾಗೂ ದೇವಾಲಯಗಳಿಗೆ ಸೇರಿದ ಆಸ್ತಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸುವ ಮೂಲಕ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ,ವಕ್ಫ್ ಬೋರ್ಡ್ ಅಕ್ರಮಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ, ಹಿಂದೂ ಮತ್ತು ರೈತ ವಿರೋಧಿ ಧೋರಣೆಯನ್ನ ಪ್ರತಿಯೊಬ್ಬರೂ ವಿರೋಧಿಸಬೇಕು ಎಂದು ಹೇಳಿದರು.
ವಕ್ಫ್ ಆಸ್ತಿಗೆ ಸಂಬಂಧಿಸಿದ 1974 ರ ಗೆಜೆಟ್ ಅಧಿಸೂಚನೆಯನ್ನು ಹಿಂಪಡೆಯಬೇಕು,ರೈತರ ಪಹಣಿಯಲ್ಲಿ ಆಸ್ತಿ ನಮೂದು ಮಾಡಿದ ವಕ್ಫ್ ಬೋರ್ಡ್ ರದ್ದುಪಡಿಸಬೇಕು, ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ತುರ್ತಾಗಿ ತೆಗೆಯಬೇಕು,ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್,ಕೆ ಎಸ್ ನಂಜುಂಡೇಗೌಡ, ಸಿದ್ದರಾಮಯ್ಯ, ವಿದ್ಯಾ ನಾಗೇಂದ್ರ,ವಿವೇಕ್, ಅರವಿಂದ್, ಸಿ ಟಿ ಮಂಜುನಾಥ್ ನೇತೃತ್ವ ವಹಿಸಿದ್ದರು.