ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿರುವ ನನಗೆ ಯಾವುದೇ ಸ್ಥಾನಮಾನ ಆಸೆ ಇಲ್ಲ,ಆಕಾಂಕ್ಷಿಯೂ ನಾನಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಟೀಕಾಕಾರರ ವಿರುದ್ಧ ಹರಿಹಾಯ್ಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಬರೀಶ್ ಕುಟುಂಬ ತ್ಯಾಗಮಯಿ ಕುಟುಂಬ, ಚಿತ್ರರಂಗದಲ್ಲಿ ಅಭಿಮಾನಿಗಳು ದೊಡ್ಡ ಗೌರವ ನೀಡಿದ್ದಾರೆ, ರಾಜಕೀಯ ಕ್ಷೇತ್ರದಲ್ಲಿ ಅಂಬರೀಶ್ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು, ನನ್ನನ್ನು ಮಂಡ್ಯ ಕ್ಷೇತ್ರದ ಜನತೆ ಸಂಸದರಾಗಿ ಆಯ್ಕೆ ಮಾಡಿದ್ದರು, ಇಷ್ಟೊಂದು ಸ್ಥಾನಮಾನ ದೊರಕಿದೆ, ಸ್ಥಾನಮಾನ ಪಡೆಯಬೇಕೆಂಬ ದುರಾಸೆ ಇಲ್ಲ, ಬಿಜೆಪಿ ಪಕ್ಷದಲ್ಲಿ ಇರುವುದೇ ದೊಡ್ಡ ಸ್ಥಾನಮಾನ ಹಾಗೂ ಗೌರವ ಎಂದರು.
ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು ಜನಪರ ಆಡಳಿತ ನೀಡುತ್ತಿದ್ದಾರೆ ಅವರ ಕೆಲಸವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡುವ ಉದ್ದೇಶ ಹೊಂದಿದ್ದೇನೆ, ಅಂತಹ ಕೆಲಸ ಮಾಡುತ್ತೇನೆ, ನನಗೆ ಕಳೆದ ಆರು ವರ್ಷದ ಹಿಂದೆ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ಒದಗಿ ಬಂದಿತ್ತು, ಅದನ್ನು ನಿರಾಕರಿಸಿದ್ದೆ, ಯಾವುದೇ ದುರುದ್ದೇಶ ಇಲ್ಲದ ನನಗೆ ಅವಕಾಶ ಒದಗಿ ಬಂದರೆ ನಿಮಗೆ ಮೊದಲು ಗೊತ್ತಾಗುತ್ತದೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಆಸ್ತಿ ಕಬಳಿಸುವ ಹುನ್ನಾರ ಜನಸಾಮಾನ್ಯರಿಗೆ ಗೊತ್ತಿರಲಿಲ್ಲ, ಅಂತಹ ತಿಳುವಳಿಕೆ ಇರಲಿಲ್ಲ ಇದೀಗ ಜನತೆ ಎಚ್ಚೆತ್ತುಕೊಳ್ಳುತ್ತಿದ್ದಾರೆ, ಕಾಂಗ್ರೆಸ್ ರೈತರು, ಮಠ, ಹಾಗೂ ದೇವಾಲಯದ ಆಸ್ತಿ ಕಬಳಿಸಲು ಮುಂದಾಗಿದೆ, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿಯನ್ನ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿ ಆಶ್ವಾಸನೆ ನೀಡಿದ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಯೋಜನೆಗಳನ್ನು ಜಾರಿಗೊಳಿಸಿ ಇದೀಗ ಜನತೆಗೆ ತಲುಪಿಸಲು ಸಾಧ್ಯವಾಗದ ಮಟ್ಟಿಗೆ ದಿವಾಳಿಯಾಗಿದೆ ಹಾಗಾಗಿ ಬಡ ಜನರ ಪಡಿತರ ಚೀಟಿ ರದ್ದು ಮಾಡುತ್ತಿದೆ, ಆ ಮೂಲಕ ಸವಲತ್ತುಗಳನ್ನು ಕಸಿಯುತ್ತಿದೆ, ಕೇಂದ್ರ ಸರ್ಕಾರ ಬಡ ಜನತೆಗೆ 5 ಕೆ.ಜಿ ಅಕ್ಕಿ ನೀಡುತ್ತಿದೆ, ಆದರೆ 5 ಕೆಜಿ ಅಕ್ಕಿ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿತ್ತು ಈಗ ಅದಕ್ಕೂ ಕತ್ತರಿ ಬೀಳುತ್ತಿದೆ, ಬಡವರು ಮತ್ತು ರೈತರಿಗೆ ಅನ್ಯಾಯ ಮಾಡುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.