ಮಂಡ್ಯ :- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮೊಟ್ಟೆ ತಿನ್ನುವ ಮೂಲಕ ಪ್ರತಿಭಟನೆ ನಡೆಸಿ ಬೇಳೆಯ ಜೊತೆ ಮೂಳೆಯು ಇರಲಿ,ಹಪ್ಪಳದ ಜೊತೆ ಕಬಾಬ್ ಇರಲಿ, ಕೊಸಂಬರಿ ಜೊತೆ ಎಗ್ ಬುರ್ಜಿ ಇರಲಿ, ಮುದ್ದೆ ಜೊತೆ ಜೊತೆ ಬೋಟಿ ಇರಲಿ ಎಂದು ಘೋಷಣೆ ಕೂಗಿ ಮಾಂಸಹಾರಕ್ಕೆ ಒತ್ತಾಯಿಸಿದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುವುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಆದರೆ ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರಕ್ಕೆ ನಿಷೇಧ ವಿಧಿಸಿ ಸಮ್ಮೇಳನಕ್ಕೆ ಆಗಮಿಸುವ ಲಕ್ಷಾಂತರ ಜನತೆಗೆ ಸಸ್ಯಾಹಾರ ನೀಡಲು ಮುಂದಾಗಿರುವುದು ಜನರ ಆಹಾರದ ಹಕ್ಕನ್ನ ಉಲ್ಲಂಘಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಂಸಾಹಾರ ನಿರ್ಬಂಧಿಸುವುದು ಸಾಧುವಲ್ಲ ಅದರಲ್ಲೂ ಮಂಡ್ಯ ಜಿಲ್ಲೆಯ ಹಬ್ಬ, ಸಂಭ್ರಮ,ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಕ್ಕೆ ಹೆಸರುವಾಸಿಯಾಗಿವೆ. ಅಲ್ಲದೇ ಸಮ್ಮೇಳನದಲ್ಲಿ ಭಾಗವಹಿಸುವ ಬಹುಸಂಖ್ಯಾತರು ಮಾಂಸಾಹಾರಿಗಳೇ ಆಗಿರುವಾಗ ನಿಷೇಧ ಏತಕ್ಕಾಗಿ ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಬೇಡಿಕೆ ಏಕೆ ಎಂದು ಪ್ರಶ್ನಿಸುವುದೇ ಅಸಮಂಜಸವಾಗಿದೆ. ಆಹಾರ ಎಂಬುದು ಆಹಾರವಷ್ಟೇ,ಅದನ್ನು ಸಸ್ಯಾಹಾರ ಮತ್ತು ಮಾಂಸಾಹಾರ ಎಂದು ಬೇರ್ಪಡಿಸಿ ಮಾಂಸಾಹಾರ ಅಧಮ, ಅಪವಿತ್ರ ಎಂಬೆಲ್ಲಾ ಭಾವವನ್ನು ಜನರಲ್ಲಿ ಬಿತ್ತುವ ಕೆಲಸ ದೇಶದಲ್ಲಿ ನಡೆಯುತ್ತಾ ಇದೆ. ಈ ಮೂಲಕ ಬಹುಜನರ ಆಹಾರ ಪದ್ಧತಿಗಳನ್ನು ಅಸ್ಪೃಶ್ಯ ಮತ್ತು ಅಕ್ರಮವಾಗಿಸುವ ಪ್ರಯತ್ನಗಳು ಶತಮಾನಗಳಿಂದಲೂ ನಡೆಯುತ್ತಿವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ 12-13 ಶತಮಾನದ ಚಾಲುಕ್ಯ ಅರಸ ಮೂರನೇ ಸೋಮೇಶ್ವರನು ಬರೆದ ಮಾನಸೋಲ್ಲಾಸ ಕೃತಿಯಲ್ಲಿ ‘ಮಾಂಸಾಹಾರಗಳ ಬಹುದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ಮಾಂಸಾಹಾರ ನಿಷೇಧ ಎಂಬುದು ಅಪಾಯಕಾರಿ ಅಜೆಂಡವಾಗಿದೆ, ನಾಗರಿಕರ ಮೂಲಭೂತ ಅಗತ್ಯವಾದ ಆಹಾರದ ವಿಚಾರದಲ್ಲಿ ಸಮ್ಮೇಳನದ ಆಯೋಜಕರು ತಾರತಮ್ಮ ಮತ್ತು ಕೀಳು ಮನೋಭಾವ ಹೊಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದು ಕಿಡಿಕಾರಿದರು.
ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರದ ಮಾರಾಟಕ್ಕೆ ವಿಧಿಸಿರುವ ನಿರ್ಬಂಧ ತೆಗೆದುಹಾಕಿ ಮುಕ್ತ ಅವಕಾಶ ಒದಗಿಸಬೇಕು, ಸಮ್ಮೇಳನದ ಊಟದಲ್ಲಿ ಸಸ್ಯಾಹಾರ ಊಟದ ಜೊತೆಗೆ ಎಲ್ಲರೂ ತಿನ್ನಬಹುದಾದ ಕೋಳಿ ಮಾಂಸ ಮೊಟ್ಟೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಸಮ್ಮೇಳನದಲ್ಲಿ ಇವುಗಳನ್ನು ನೀಡದಿದ್ದರೆ ಸಾರ್ವಜನಿಕರಿಂದ ಕೋಳಿ, ಮೊಟ್ಟೆ ಮತ್ತು ಪಡಿತರ ಸಂಗ್ರಹಿಸಿ ಮಾಂಸಾಹಾರ ವಿತರಿಸುವ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯುನ ಸಿ ಕುಮಾರಿ. ಎ ಎಲ್ ಕೃಷ್ಣೇಗೌಡ, ಕರುನಾಡು ಸೇವಕರು ಸಂಘಟನೆಯ ಎಂ ಬಿ ನಾಗಣ್ಣಗೌಡ, ಕರವೇ ಹೆಚ್ ಡಿ ಜಯರಾಮ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಎಂ ವಿ ಕೃಷ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ಸಂದೇಶ್,ವಕೀಲ ಬಿ ಟಿ ವಿಶ್ವನಾಥ್, ಡಾ. ಬಿ ಆರ್ ಅಂಬೇಡ್ಕರ್ ವಾರಿಯರ್ಸ್ ನ ಗಂಗರಾಜು. ನಿರಂಜನ್,ಟಿ ಡಿ ನಾಗರಾಜ್, ನರಸಿಂಹಮೂರ್ತಿ, ಎಂ ಸಿ ಲಂಕೇಶ್ ಮಂಗಲ, ಲಕ್ಷ್ಮಣ್ ಚೀರನಹಳ್ಳಿ ನೇತೃತ್ವ ವಹಿಸಿದ್ದರು.