ಮಂಡ್ಯ :- ಪಂಚಮಸಾಲಿ ಲಿಂಗಾಯಿತ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ -2ಎ ಮೀಸಲಾತಿಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಪತ್ರ ರವಾನಿಸಿ ಪಂಚಮಸಾಲಿ ಲಿಂಗಾಯತ ಸಮುದಾಯದ ಜನತೆ ಪ್ರವರ್ಗ -2ಎ ಮೀಸಲಾತಿಗೆ ಸೇರ್ಪಡೆ ಮಾಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದು ಸಂವಿಧಾನ ಬಾಹಿರವಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 2002 ರಿಂದ ಹಿಂದುಳಿದ ವರ್ಗಗಳನ್ನು ಪ್ರ ವರ್ಗ-1,ಪ್ರ ವರ್ಗ-2ಎ,ಪ್ರ ವರ್ಗ-2ಬಿ,ಪ್ರ ವರ್ಗ-3ಎ ಮತ್ತು ಪ್ರ ವರ್ಗ- 3ಬಿ ಎಂದು ವಿಂಗಡಿಸಿ ಶೇ. 32 ರಷ್ಟು ಮೀಸಲಾತಿ ನೀಡಲಾಗಿದೆ. ಇದರಲ್ಲಿ ಪ್ರವರ್ಗ-2ಎ ಗೆ ಶೇ.15 ರಷ್ಟು ಮೀಸಲು ಸೌಲಭ್ಯ ಸಿಗುತ್ತಿದೆ, ಆದರೆ ಇದೀಗ ಪ್ರವರ್ಗ -3ಬಿ ಯಲ್ಲಿರುವ ಪಂಚಮಸಾಲಿ ಲಿಂಗಾಯಿತ ಸಮುದಾಯ ಪ್ರವರ್ಗ-2ಎ ಗೆ ಸೇರ್ಪಡೆ ಮಾಡಿ ಶೇ 15ರ ಮೀಸಲಾತಿಯಡಿಯಲ್ಲಿ ಮೀಸಲು ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದೆ.
2022-23ನೇ ಸಾಲಿನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪ್ರವರ್ಗ-2 ಬಿ ಯಲ್ಲಿದ್ದ ಮುಸ್ಲಿಮರ ಶೇ 4 ಮೀಸಲಾತಿಯನ್ನು ರದ್ದು ಪಡಿಸಿ ಪ್ರವರ್ಗ-2ಸಿ ಮತ್ತು ಪ್ರವರ್ಗ-2 ಡಿ ಎಂದು ಹೊಸದಾಗಿ ವರ್ಗೀಕರಿಸಿ ಮೀಸಲು ನೀಡಿದ್ದು , ಬಿಜೆಪಿ ಸರ್ಕಾರದ ಮೀಸಲು ಆದೇಶದ ವಿರುದ್ಧ ಮುಸ್ಲಿಂ ಸಮುದಾಯ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ, ಅದೇ ರೀತಿ ಹೊಸದಾಗಿ ಸೃಷ್ಟಿಸಿರುವ ಪ್ರವರ್ಗ -2ಸಿ ಮತ್ತು ಪ್ರವರ್ಗ-2ಡಿ ಮತ್ತು ಮುಸ್ಲಿಂ ಸಮುದಾಯವನ್ನು ಆರ್ಥಿಕ ದುರ್ಬಲ ವರ್ಗಕ್ಕೆ ಸೇರ್ಪಡೆ ಮಾಡಿರುವ ಆದೇಶದ ವಿರುದ್ಧವೂ ಸಹ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಸಾಲಿಟರಿ ಜನರಲ್ ಪರಿಸ್ಕೃತ ಪುನರ್ ವರ್ಗೀಕರಣದ ಆದೇಶವನ್ನು ಶಿಕ್ಷಣ ಮತ್ತು ಉದ್ಯೋಗಕ್ಕೆ ಅಳವಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರ ವರ್ಗ -2ಎ ಗೆ ಯಾವುದೇ ಸಮುದಾಯವನ್ನು ಸೇರ್ಪಡೆ ಮಾಡಬಾರದು ಎಂದು ರಾಘವೇಂದ್ರ ಡಿ ಜಿ ಎಂಬುವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ ಸದರಿ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರವರ್ಗ- 1 ರ ಮೀಸಲಾತಿ ಪ್ರಮಾಣ ಬದಲಾವಣೆ ಹಾಗೂ ಯಾವುದೇ ಸಮುದಾಯವನ್ನು ಪ್ರವರ್ಗ-2ಗೆ ಟು ಸೇರ್ಪಡೆ ಮಾಡುವುದು ಅಥವಾ ಕೈಬಿಡುವುದನ್ನು ಹೈಕೋರ್ಟ್ ನ ಅನುಮತಿ ಇಲ್ಲದೆ ಜಾರಿಗೊಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿರುತ್ತಾರೆ, ನ್ಯಾಯಾಲಯಗಳಲ್ಲಿ ವಿಚಾರಣೆ ಬಾಕಿ ಇರುವುದರಿಂದ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡರು ನ್ಯಾಯಾಲಯದಲ್ಲಿ ನಿಂದನೆಯಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಶೈಕ್ಷಣಿಕ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಡಾ. ನಾಗನಗೌಡ ಸಮಿತಿ, ಎಲ್ ಜಿ ಹಾವನೂರು ಆಯೋಗ, ನಾಯಮೂರ್ತಿ ಓ ಚನ್ನಪ್ಪ ರೆಡ್ಡಿ ಮತ್ತು ಹಿಂದುಳಿದ ವರ್ಗಗಳ ಎರಡನೇ ಆಯೋಗದ ವರದಿ ಮುಂದುವರಿದ ಸಮಾಜ ಎಂದು ಹೇಳಿದೆ, ಹಾಗಾಗಿ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರ ವರ್ಗ -2ಎ ಗೆ ಸೇರ್ಪಡೆ ಮಾಡಿದರೆ ಪ್ರ ವರ್ಗ -2ಎ ನಲ್ಲಿರುವ ಅಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರ ಹಿಂದುಳಿದ ಜಾತಿಗಳು ಮೀಸಲು ಸೌಲಭ್ಯದಿಂದ ವಂಚನೆಗೆ ಒಳಗಾಗಲಿವೆ, ಉದ್ಯೋಗ,ಶಿಕ್ಷಣ,ರಾಜಕೀಯ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯ ಕಬಳಿಸಲಿದೆ ಹಾಗಾಗಿ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರ ವರ್ಗ -2ಎ ಸೇರಿಸಬಾರದು ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಕೆ ಎಚ್ ನಾಗರಾಜು, ಗೌರವಾಧ್ಯಕ್ಷ ಬಿ ಲಿಂಗಯ್ಯ, ಕಾರ್ಯಾಧ್ಯಕ್ಷ ಎಲ್ ಸಂದೇಶ್, ಶಕುಂತಲ, ಡಿ ರಮೇಶ್, ಸತೀಶ್ ಆಚಾರ್, ನಾಗರತ್ನ, ಎಂ ಎಸ್ ರಾಜಣ್ಣ, ಎನ್ ದೊಡ್ಡಯ್ಯ, ಮರಿ ಹೆಗ್ಗಡೆ, ಬಿ ಶಿವರಾಜು, ಸಾತನೂರು ಕೃಷ್ಣ, ರಮೇಶ್ ಬಾಬು, ಸಂಪಳ್ಳಿ ದೇವರಾಜು, ರುದ್ರೇಶ್, ಎಂ ವಿ ಪುಟ್ಟಸ್ವಾಮಿ ನೇತೃತ್ವ ವಹಿಸಿದ್ದರು.