ಮಂಡ್ಯ :- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಸಕ್ಕರೆ ನಗರಿಯಲ್ಲಿ ಬೈಕ್ ಜಾಥಾ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೈಕ್ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು. ಕನ್ನಡ ಬಾವುಟ ದೊಂದಿಗೆ ಸಾಗಿದ ಜಾಥಾ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾಗಿ ಸಮ್ಮೇಳನಕ್ಕೆ ಕರೆಯೋಲೆ ನೀಡಿತು.
ಜಾಥಾ ಬೆಂಗಳೂರು – ಮೈಸೂರು ಹೆದ್ದಾರಿ ಮಾರ್ಗವಾಗಿ ಕಲ್ಲಹಳ್ಳಿಯ ಎಪಿಎಂಸಿ ಮಾರುಕಟ್ಟೆ, ವಿವಿ ನಗರ, ಅನ್ನಪೂರ್ಣೇಶ್ವರಿ ನಗರ, ಕಾರಸವಾಡಿ ರಸ್ತೆಯ ಅರಳಿಮರ ಸರ್ಕಲ್ ಮುಖಾಂತರ ಕಾಲುವೆ ರಸ್ತೆಯಲ್ಲಿ ಸಾಗಿ ಹೊಸಹಳ್ಳಿಯ ಶ್ರೀ ವೆಂಕಟೇಶ್ವರ ದೇವಸ್ಥಾನ, ಬಿಸಿಲು ಮಾರಮ್ಮನ ದೇವಸ್ಥಾನ ಹೊಸಹಳ್ಳಿ ವೃತ್ತ, ಅಂಬೇಡ್ಕರ್ ರಸ್ತೆಯಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿಯಿಂದ ಸುಭಾಷ್ ನಗರದ ವಿನೋಬ ರಸ್ತೆ, ಸಂಜಯ ಸರ್ಕಲ್, ಆರ್ಪಿ ರಸ್ತೆಯ ಮೂಲಕ ಕರ್ನಾಟಕ ಬಾರ್ ಸರ್ಕಲ್ ತಲುಪಿತು.
ಅಲ್ಲಿಂದ ಮುಂದುವರೆದ ಜಾಥಾ ಅಂಬೇಡ್ಕರ್ ರಸ್ತೆಯಲ್ಲಿ ಸಂಚರಿಸಿ ವಿವಿ ರಸ್ತೆಯ ಮೂಲಕ ಮಹಾವೀರ ವೃತ್ತ, ವಿವೇಕಾನಂದ ರಸ್ತೆ, ಬೆಸಗರಹಳ್ಳಿ ರಾಮಣ್ಣ ವೃತ್ತ, ಆಸ್ಪತ್ರೆ ರಸ್ತೆ, ನಂದಾ ವೃತ್ತ, ಫ್ಯಾಕ್ಟರಿ ಸರ್ಕಲ್, ಗುತ್ತಲು ರಸ್ತೆ, ಸ್ವರ್ಣಸಂದ್ರ ಶನೇಶ್ವರ ದೇವಸ್ಥಾನದ ಮೂಲಕ ಮತ್ತೆ ಫ್ಯಾಕ್ಟರಿ ವೃತ್ತಕ್ಕೆ ತಲುಪಿ ಕಾಳಮ್ಮನ ದೇವಸ್ಥಾನ ಕಾರೆಮನೆ ಗೇಟ್, ಹೊಳಲು ವೃತ್ತದ ಮೂಲಕ ಸಂಚರಿಸಿ ರೈತ ಸಭಾಂಗಣ ದವರೆಗೆ ಸಾಗಿಸಮಾಪ್ತಿಗೊಂಡಿತು, ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದ್ದು, ಈ ನಿಟ್ಟಿನಲ್ಲಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕನ್ನಡಿಗ ಮನಸ್ಸುಗಳು ಒಂದಾಗಿ ಸೇರಿ ಜೊತೆಗೂಡಿ ಸಾಹಿತ್ಯದ ಹಬ್ಬವನ್ನು ಆಚರಿಸುವುದು ಇದರ ಉದ್ದೇಶವಾಗಿದೆ. ಎಲ್ಲಾ ಮಂಡ್ಯ ಜನತೆಯು ಸಹಕಾರದಿಂದ ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾಡಳಿತ ಸೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ವಿಷಯವು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕನ್ನಡ ಪ್ರಜ್ಞೆ, ಕನ್ನಡ ಪ್ರೇಮ ಪ್ರತಿಯೊಬ್ಬರಲ್ಲಿಯೂ ಜಾಗೃತವಾಗಿ ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಬೇಕು. ಮಂಡ್ಯ ಜನತೆಗೆ ಜಾಗೃತಿ ಮೂಡಿಸಲು ಮೋಟಾರ್ ಬೈಕ್ ಜಾಥಾವನ್ನು ಆಯೋಜಿಸಲಾಗಿದೆ. ಎಲ್ಲರೂ ಸೇರಿ ಜಾಥಾವನ್ನು ಯಶಸ್ವಿಗೊಳಿಸಿ ಎಂದರು.
ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ ಅವರು ಮಾತನಾಡಿ, ಸಮ್ಮೇಳನದ ಅಂಗವಾಗಿ ಇಂದು ಬೈಕ್ ಜಾಥಾವನ್ನು ಹಮ್ಮಿಕೊಳ್ಳುವ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾಕಷ್ಟು ಮಹಿಳೆಯರು ಹಾಗೂ ಪುರುಷರು ಒಟ್ಟಿಗೆ ಪಾಲ್ಗೊಂಡು ನಗರದ ಎಲ್ಲಾ ಭಾಗಗಳಲ್ಲಿ ಸಮ್ಮೇಳನದ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯ ಜನರು ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೂ ಆಥಿತ್ಯ ನೀಡಿ ಜಿಲ್ಲೆಯ ಹೆಸರನ್ನು ಎಲ್ಲೆಡೆ ಪಸರಿಸುವಂತಾಗಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೆಗೌಡ, ಕೋಶಾಧ್ಯಕ್ಷ ಅಪ್ಪಾಜಪ್ಪ, ತಾಲ್ಲೂಕು ಅಧ್ಯಕ್ಷ ಚಂದ್ರಲಿಂಗು, ಪದಾಧಿಕಾರಿಗಳಾದ ರತ್ನಾಶ್ರೀ, ವಿಜಯಲಕ್ಷ್ಮಿ, ಲತಾ, ಪ್ರೊ ಎಂ ಎ ಪ್ರಮೀಳಾ, ಪುಷ್ಪ ಲತಾ ಇನ್ನಿತರರಿದ್ದರು.