2.3 C
New York
Friday, December 20, 2024

Buy now

spot_img

ಹಿಂದಿ ಹೇರಿಕೆ ವಿರೋಧಿಸದಿದ್ದರೆ ಕನ್ನಡ ಭಾಷೆಗೆ ಗಂಡಾಂತರ

ಮಂಡ್ಯ :- ರಾಷ್ಟ್ರ ಭಾಷೆಯ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರುವ ಮೂಲಕ ಕನ್ನಡ ಮುಂತಾದ ದೇಶ ಭಾಷೆಗಳನ್ನು ದಮನಿಸುವ ಕೆಲಸ ನಡೆಯುತ್ತಿದೆ. ಇದನ್ನು ನಾವುಗೆಲ್ಲರೂ ಪ್ರತಿಭಟಿಸದೆ ಹೋದರೆ ನಮ್ಮ ಭಾಷೆಗಳು ಗಂಡಾಂತರಕ್ಕೆ ಸಿಲುಕಿಕೊಳ್ಳುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು .
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ಬಹುತ್ವವನ್ನು ಸಾರುವ ನಮ್ಮ ಸಂವಿಧಾನದ ಮೇಲೆ ಕಳೆದ ಕೆಲವು ವರ್ಷಗಳಿಂದ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಈ ಆಕ್ರಮಣದ ವಿರುದ್ದ ಹೋರಾಡಬೇಕಾದದು ನಮ್ಮೆಲ್ಲರ ಜವಾಬ್ದಾರಿ ಎಂದು ತಮ್ಮ ಗಮನಕ್ಕೆ ತರ ಬಯಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾವು ಕರ್ನಾಟಕಕ್ಕೆ ಬಂದುದೊಗಿರುವ ಕಂಟಕಗಳೇನು? ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯದಿಂದ 4.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆಯನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಆದರೆ, ನಮಗೆ 55-59 ಸಾವಿರ ಕೋಟಿ ರೂ. ಮಾತ್ರ ನಮಗೆ ವಾಪಸ್ ಬರುತ್ತಿದೆ. ಇದರಿಂದ ನಾಡಿನ ಸಮಗ್ರ ಅಭಿವೃದ್ದಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ದುಡಿಯುವ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸಿ ಶ್ರೀಮಂತ ಕಾರ್ಪೋರೇಟ್ ಕಂಪನಿಗಳ ಮೇಲಿನ ತೆರಿಗೆಯನ್ನು ಇಳಿಸಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲದೆ ಜನರ ಕೊಳ್ಳುವ ಶಕ್ತಿ ಕಡಿಮೆಯಾಯಿತು. ಆದ್ದರಿಂದಲೇ ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಕೆಲವು ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಸೇರಿಕೊಂಡು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ನಿರಂತರವಾಗಿ ಪ್ರಯತ್ನಿಸಿದವು. ಆದರೆ, ಸಕ್ಕರೆ ಮತ್ತು ಸಿಹಿ ಬೆಳೆಯುವ ಮಂಡ್ಯದ ಜನರು ವಿಷಹಾಕಲು ಬಂದವರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಇತಿಹಾಸದಲ್ಲಿ ಮತ್ತೊಮ್ಮೆ ತಾವು ಸಿಹಿ ನೀಡುವವರೆ ಹೊರತು ವಿಷ ನೀಡುವವರಲ್ಲ ಎಂದು ಸಾಬೀತು ಮಾಡಿದ್ದಾರೆ. ಮಂಡ್ಯದ ಜನರನ್ನು ನಾಡಿನ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಸಮ್ಮೇಳನ ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕಬೇಕು. ನಾಡಿನ ಬೌದ್ಧಿಕ ದಾಸ್ಯಕ್ಕೆ ಕಾರಣಗಳೇನು?, ಅದನ್ನು ಮೀರುವ ಬಗೆ ಹೇಗೆ? ಎಂಬುದನ್ನು ಕುವೆಂಪು ವಿವರಿಸಿದ್ದಾರೆ. ಸಾವಿರಾರು ವರ್ಷಗಳಿಂದ ಪುರೋಹಿತಶಾಹಿ ನಮನ್ನು ದಾಸ್ಯದಲ್ಲಿ ಹೇಗೆ ಮುಳುಗಿಸಿದೆ ಎಂಬ ಸಮಗ್ರ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದರು.
ಆಧುನಿಕತೆಯ ಕಾಲದಲ್ಲೂ ನಾವು ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡಿಲ್ಲ. ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರಂಗಗಳನ್ನು ವೈಚಾರಿಕ ದೃಷ್ಟಿಯಿಂದ ನೋಡದೇ ಇದ್ದರೆ ಕೇಡು ತಪ್ಪುವುದಿಲ್ಲ. ಯಾವ ಸಂಪ್ರದಾಯವೂ ಸಂಕೋಚಕ್ಕೆ ಸಿಲುಕಬಾರದು. ಸರ್ವಧರ್ಮಗಳ ಸಾರ, ಉದಾರದರ್ಶನವನ್ನು ಕಂಡು ಬಾಳನ್ನು ಕಟ್ಟಿಕೊಳ್ಳಬೇಕು. ಜಾತಿ, ಮತ, ದೇಶ, ಕಾಲಗಳ ಭೇದವಿಲ್ಲದೆ ಎಲ್ಲಾ ಮಹಾಪುರುಷರ ಜ್ಞಾನಗಂಗೆಗಳನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂದು ಹೇಳಿದರು.
ಇಂಗ್ಲಿಷ್‌ ಸೇರಿದಂತೆ ಪ್ರಮುಖ ಭಾಷೆಗಳ ಕೃತಿಗಳು ಡಿಜಿಟಲೀಕರಣದಿಂದ ಜಗತ್ತಿನ ಎಲ್ಲೆಡೆ ಎಲ್ಲರಿಗೂ ಮುಕ್ತವಾಗಿ ದೊರೆಯುತ್ತದೆ. ಕನ್ನಡದ ಸಮಗ್ರ ಸಾರಸ್ವತ ಲೋಕದ ಡಿಜಿಟಲೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಜಗತ್ತಿನಲ್ಲಿರುವ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಜ್ಞಾನವನ್ನು ವೃದ್ಧಿಸುವ ಕೆಲಸವಾಗಬೇಕು ಎಂದು ತಿಳಿಸಿದರು
ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ಕನ್ನಡ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿಯ ಇತಿಹಾಸಗಳನ್ನು ಬಿಂಬಿಸುವ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದರು.
ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉತ್ಪಾದನೆಯಾಗುವ ಪ್ರತಿ ಉತ್ಪನ್ನದ ಮೇಲೂ ಕನ್ನಡ ಕಡ್ಡಾಯವಾಗಿ ನಮೂದಿಸಲು ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ನಾಡಿನ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿ, ಇತಿಹಾಸಗಳನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಲಾಗಿದೆ. ಆಡಳಿತದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಸರ್ಕಾರ ಬದ್ಧವಾಗಿದೆ. ಸಚಿವ ಸಂಪುಟದ ನಿರ್ಣಯ, ಸಚಿವರ ಟಿಪ್ಪಣಿ, ವಿಧೇಯಕಗಳು ಕನ್ನಡದಲ್ಲಿರುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಡಳಿತ ಸೇರಿದಂತೆ ಪ್ರತಿ ಹಂತದಲ್ಲೂ ಕನ್ನಡದ ಅಸ್ಮಿತೆ ಉಳಿಸಬೇಕಾಗಿದೆ ಎಂದರು.
ಜಗತ್ತಿನ ಬೇರೆ ಬೇರೆ ಭಾಷೆಗಳಿಂದ ಕೃತಿಗಳು ಕನ್ನಡಕ್ಕೆ ಅನುವಾದ ಆಗಬೇಕಿದೆ. ಆ ಮೂಲಕ ಜ್ಞಾನವನ್ನು ವಿಸ್ತರಿಸುವ ಕೆಲವಾಗಬೇಕಿದೆ. ವೈಜ್ಞಾನಿಕ, ವೈಚಾರಿಕ ಸಾಹಿತ್ಯದ ಮೂಲಕ ದೇಶಕ್ಕೆ ಬಂದೊದಗಿರುವ ಕೇಡುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇಂತಹ ವಿಚಾರಗಳು ಸಮ್ಮೇಳನದಲ್ಲಿ ಚರ್ಚೆಯಾಗಬೇಕಾಗಿದೆ ಎಂದು ತಿಳಿಸಿದರು.
2013-18 ರ ವರೆಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 1161ಕೋಟಿ ರೂ. ಅನುದಾನ ನೀಡಿದ್ದೆವು. 2023-24 ಮತ್ತು 2024-25 ರಲ್ಲಿ ಹೆಚ್ಚುವರಿಯಾಗಿ 506ಕೋಟಿ ರೂ. ಅನುದಾನ ನೀಡಿದ್ದೇವೆ. ಕನ್ನಡ ಉಳಿವಿಗಾಗಿ, ಏಳಿಗೆಗಾಗಿ ಸರ್ಕಾರ ಸದಾ ಸಿದ್ಧವಿರಲಿದೆ ಎಂದು ವಾಗ್ದಾನ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles