ಮಂಡ್ಯ :- ಬೆಂಗಳೂರು ಮೈಸೂರು ರಾಷ್ಟ್ರೀಯ ದಾರಿಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ದರೋಡೆ ಪ್ರಕರಣ ಇದೀಗ ಮತ್ತೆ ಆರಂಭಗೊಂಡಿದ್ದು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬೆಲ್ಲದ ವ್ಯಾಪಾರಿಯ ಕಾರು ಅಡ್ಡಗಟ್ಟಿ ನಗದು ದೋಚಿರುವ ಘಟನೆ ನಡೆದಿದೆ.
ತಾಲೂಕಿನ ಬೂದನೂರು ಬಳಿ ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ಮಂಡ್ಯ ನಗರದ ಗುತ್ತಲು ನಿವಾಸಿ ವಿನೋದ್ ಬಳಿ ಇದ್ದ ಹಣವನ್ನು ದೋಚಿ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಬೆಲ್ಲದ ವ್ಯಾಪಾರಿಯಾದ ವಿನೋದ್ ವ್ಯಾಪಾರ ಮುಗಿಸಿಕೊಂಡು ಸೋಮುವಾರ ರಾತ್ರಿ ಮದ್ದೂರಿನಿಂದ ಮಂಡ್ಯ ನಗರಕ್ಕೆ ಹಿಂದಿರುಗುವ ವೇಳೆ ಹಳೇ ಬೂದನೂರು-ಹೊಸ ಬೂದನೂರು ನಡುವಿನ ಕಾಲುವೆ ಬಳಿ ಬೈಕ್’ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕಾರಿನ ಗಾಜಿನ ಮೇಲೆ ಮೊಟ್ಟೆ ಹೊಡೆದು ವಾಹನ ಚಾಲನೆ ಮಾಡುತ್ತಿದ್ದ ವಿನೋದ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದಾಗ ವಾಹನ ನಿಲ್ಲಿಸಲಾಗಿದೆ. ಈ ವೇಳೆ ವ್ಯಕ್ತಿಯ ಮೇಲೆರಗಿ ಹಲ್ಲೆ ಮಾಡಿರುವ ದುಷ್ಕರ್ಮಿಗಳು 55 ಸಾವಿರ ಹಣ ಕಸಿದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ತನಿಖೆ ಅರಂಭಿಸಿದ್ದಾರೆ.
ಬೂದನೂರು ಬಳಿ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬೀದಿ ದೀಪವಿಲ್ಲದೆ ಕತ್ತಲು ಅವರಿಸಿದ್ದು ವಾಹನ ಸವಾರರು ಒಬ್ಬಂಟಿಯಾಗಿ ಓಡಾಡಲು ಜೀವ ಭಯ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಗ್ರಾಪಂ ಬೀದಿ ದೀಪ ವ್ಯವಸ್ಥೆ ಮಾಡುವಂತೆ ಯುವ ಮುಖಂಡ ಶಾಮಿಯಾನ ನಾರಾಯಣ್ ಒತ್ತಾಯಿಸಿದ್ದಾರೆ.
ಶಾಸಕ ಪಿ. ರವಿಕುಮಾರ್ ಗೌಡ ಘಟನೆ ಕುರಿತು ಜಿಲ್ಲಾ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಾಲದಂಡಿಗೆ ಕರೆಮಾಡಿ ಮಾಹಿತಿ ಪಡೆದು ಆರೋಪಿಗಳ ಪತ್ತೆಗೆ ಸೂಚಿಸಿದ್ದಾರೆ.