ಮಂಡ್ಯ :- ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸಂಸತ್ತಿನಲ್ಲಿ ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ಕರೆ ನೀಡಿದ್ದ ಮಂಡ್ಯ ಬಂದ್ ನಿಮಿತ್ತ ಬೃಹತ್ ಬೈಕ್ ಜಾಥಾ ನಡೆಯಿತು.
ದಲಿತ,ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ಜಾಥಾ ಹೊರಟರು.
ಅಂಬೇಡ್ಕರ್ ಜಿಂದಾಬಾದ್, ಸಂವಿಧಾನಕ್ಕೆ ಜೈ ಕಾರ ಮೊಳಗಿಸುತ್ತ ಸಾಗಿದ ಜಾಥಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಾಥಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರುನಾಡ ಸೇವಕರು, ಕರ್ನಾಟಕ ರಕ್ಷಣಾ ವೇದಿಕೆ, ಬಹುಜನ ಸಮಾಜ ಪಕ್ಷ, ಸಮಾನ ಮಸ್ಕರ ವೇದಿಕೆ, ಸಿಪಿಐ ಎಂ ಪಕ್ಷ, ಅಖಿಲ ಭಾರತ ವಕೀಲರ ಒಕ್ಕೂಟ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ, ಮುಸ್ಲಿಂ ಒಕ್ಕೂಟ, ಡಾ. ಅಂಬೇಡ್ಕರ್ ವಾರಿಯರ್ಸ್, ಲಿಂಗಾಯಿತ ಮಹಾಸಭಾ, ಜಿಲ್ಲಾ ಸವಿತಾ ಸಮಾಜ, ಅಹಿಂದ ಚಳವಳಿ,ಜಿಲ್ಲಾ ಕುರುಬರ ಸಂಘ, ಭೀಮ್ ಆರ್ಮಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ನಿವೃತ್ತ ನೌಕರರ ಸಂಘ, ರಾಜ್ಯ ರೈತ ಸಂಘ, ವಿಶ್ವಕರ್ಮ ಮಹಾಸಭಾ, ಕೃಷಿ ಕೂಲಿಕಾರರ ಸಂಘ, ರೈತ, ಕನ್ನಡಪರ ಹಾಗೂ ಪ್ರಗತಿಪರ ಹೋರಾಟಗಾರರು ಭಾಗಿಯಾಗಿ ಅಂಬೇಡ್ಕರ್ ರವರು ಪ್ರಜಾಪ್ರಭುತ್ವದ ಪ್ರತಿಪಾದಕರಾಗಿ, ದೇಶಕ್ಕೆ ಸಂವಿಧಾನದ ಮೂಲಕ ವಿವಿಧತೆಯಲ್ಲಿ ಏಕತೆ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು ಭಾರತದ ಶೋಷಿತರ, ಮಹಿಳೆಯರ ಕೊರಳ ದನಿಯಾದವರು ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಸಮಸ್ತ ಭಾರತೀಯರ ಬದುಕಿನ ಘನತೆಯನ್ನು ಹೆಚ್ಚಿಸಲು ತಮ್ಮ ಬದುಕನ್ನೇ ಪಣಕಿಟ್ಟ ಮಹಾ ಮಾನವತಾವಾದಿ ಯಾಗಿದ್ದಾರೆ.
ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಷಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವ್ಯಂಗ್ಯ ಮತ್ತು ಹಾಸ್ಯದ ರೂಪದಲ್ಲಿ ಅಪಮಾನಿಸಿದ್ದಾರೆ. ಸಂವಿಧಾನದ ಮೂಲಕ ಉನ್ನತ ಹುದ್ದೆಯಲ್ಲಿರುವ ಅಮಿತ್ ಶಾ, ಅದೇ ಸಂವಿಧಾನ ನಿರ್ಮಾತೃ ಬಾಬಾ ಸಾಹೇಬರ ಅವಹೇಳನ ಮಾಡಿದ್ದಾರೆ. ತಮ್ಮ ಹುದ್ದೆಯ ಘನತೆಯನ್ನು ಮೀರಿದ ಅಮಿತ್ ಷಾ ಪ್ರಜ್ಞಾಪೂರ್ವಕವಾಗಿ ಆಡಿದ ಮಾತು, ಅವರನ್ನು ಮುನ್ನಡೆಸುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮನಸ್ಥಿತಿಯನ್ನು ಎತ್ತಿತೋರಿಸುತ್ತಿದೆ. ಇದು ಬಾಬಾ ಸಾಹೇಬರು ಮತ್ತು ಸಂವಿಧಾನದ ಮೇಲಿನ ಅಕ್ರಮಣವಿದು. ಇದರಿಂದಾಗಿ ಕೋಟ್ಯಾಂತರ ಭಾರತೀಯರ ಮನಸ್ಸಿಗೆ ನೋವುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರನ್ನು ಅವಹೇಳನ ಮಾಡಿರುವ ಅಮಿತ್ ಶಾ ದೇಶದ ಜನರ ಕ್ಷಮೆಯಾಚಿಸಬೇಕು, ಪ್ರಧಾನಿ ಮೋದಿ ಕೇಂದ್ರ ಸಚಿವ ಸಂಪುಟದಿಂದ ಅಮಿತ್ ಶಾ ರನ್ನ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ, ಆರ್ ಪಿ ರಸ್ತೆ, ನೂರಡಿ ರಸ್ತೆ, ವಿವಿ ರಸ್ತೆ, ಗುತ್ತಲು ರಸ್ತೆ, ಪೇಟೆ ಬೀದಿ,ಬನ್ನೂರು ರಸ್ತೆ,ಪಿ ಇಎಸ್ ಇಂಜಿನಿಯರಿಂಗ್ ಕಾಲೇಜ್ ರಸ್ತೆ ಮೂಲಕ ಸಾಗಿದ ಜಾಥಾ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿ ಪ್ರತಿಭಟನಾ ಸಭೆ ನಡೆಸಲಾಯಿತು.
ಮಹಿಳಾ ಹೋರಾಟಗಾರ್ತಿ ಸುನಂದ ಜಯರಾಂ, ವೆಂಕಟಗಿರಿಯಯ್ಯ ಲಕ್ಷ್ಮಣ್ ಚೀರನಹಳ್ಳಿ, ಸಿ ಕುಮಾರಿ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಶಿವಶಂಕರ್, ಎಂ ಬಿ ನಾಗಣ್ಣಗೌಡ, ಅಂದಾನಿ ಸೋಮನಹಳ್ಳಿ, ಎಂ ವಿ ಕೃಷ್ಣ ಟಿ.ಎಲ್ ಕೃಷ್ಣೇಗೌಡ,ಹಲ್ಲೆಗೆರೆ ಶಿವರಾಂ,
ಎಲ್ ಸಂದೇಶ್,ನರಸಿಂಹಮೂರ್ತಿ ಮುಕ್ತಿಯಾರ್ ಅಹಮದ್, ನಂಜುಂಡ ಮೌರ್ಯ, ಗಂಗರಾಜ್ ಹನಕೆರೆ ಹೆಚ್.ಡಿ.ಜಯರಾಂ, ಜೆ.ರಾಮಯ್ಯ ನೇತೃತ್ವ ವಹಿಸಿದ್ದರು.