ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಧ್ವಾನ ಸರಿಪಡಿಸಲು ಹಳೇ ಬೂದನೂರು ಗ್ರಾಮಸ್ಥರು ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದ ಅಧಿಕಾರಿಗಳ ತಂಡವನ್ನು ತರಾಟೆ ತೆಗೆದುಕೊಂಡರು
ಗುರುವಾರ ಬೆಳಿಗ್ಗೆ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ಸಮಸ್ಯೆ ಕುರಿತು ಪರಿಶೀಲನೆಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಉಪ ಪೋಲಿಸ್ ಅಧೀಕ್ಷಕ ಸಿ.ಇ. ತಿಮ್ಮಯ್ಯ , ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದರ ನೇತೃತ್ವದ ತಂಡದ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳನ್ನು ಗ್ರಾಮದ ಜನತೆ ತರಾಟೆ ತೆಗೆದುಕೊಂಡು ಹೆದ್ದಾರಿ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವಂತೆ ಒತ್ತಾಯಿಸಿದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ದೈವಿಕ್ ಹಾಜರಿಗೆ ಸ್ವಂತಮನೆ ನಮ್ಮಹಕ್ಕು ಹೋರಾಟಗಾರ ಬೂದನೂರು ಸತೀಶ ತೀವ್ರ ಅಕ್ಷೇಪ ವ್ಯಕ್ತಪಡಿಸಿ ಹೆದ್ದಾರಿ ಯೋಜನಾ ನಿರ್ದೇಶಕ, ಭೂಸ್ವಾಧೀನಾಧಿಕಾರಿ ಹಾಜರಾಗುವಂತೆ ಸೂಚಿಸಲು ಒತ್ತಡ ಹಾಕಿದರು
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡು ಭಾಗದಲ್ಲಿ ಸ್ಥಳೀಯರಿಗೆ ಹಾಗೂ ಟೋಲ್ ಪಾವತಿಸದ ಸಾರ್ವಜನಿಕರು ಓಡಾಡಲು ಸರ್ವೀಸ್ ರಸ್ತೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಡಿಬಿಎಲ್ ಗುತ್ತಿಗೆದಾರ ಕಂಪನಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದೆ. ಪರಿಣಾಮ ಸರ್ವೀಸ್ ರಸ್ತೆ ಪ್ರಯಾಣ ಜೀವಭಯ ಹುಟ್ಟಿಸುತ್ತಿದೆ. ನೂರಾರು ಸಮಸ್ಯೆ ಹೊತ್ತಿರುವ ಈ ಭಾಗದ ಸಮಸ್ಯೆಗಳಲ್ಲಿ ನಾವು ಬದುಕುತ್ತಿದ್ದೇವೆ ಎಂದು ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಶಾಸಕರು ಕೇವಲ ಪತ್ರ ವ್ಯವಹಾರ ಮಾಡದೇ ಕಾಲ ಮಿತಿಯಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲು ಮನವಿ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಮಾಡಿಕೊಂಡಿರುವ ಭೂಮಿ ತೆರವುಗೊಳಿಸಬೇಕು. ಪಾದಾಚಾರಿ ರಸ್ತೆ, ಕುಡಿಯುವ ನೀರಿನ ಮಾರ್ಗ ಹಾಗೂ ಇನ್ನಿತರ ಸೌಲಭ್ಯಕ್ಕೆ ತೆರವುಗೊಂಡಿರುವ ಸ್ಥಳ ಕಾಯ್ದಿರಿಸಬೇಕು. ಈಗಾಗಲೇ ಅನುಮೋದನೆಗೊಂಡಿರುವ ಪಾದಾಚಾರಿ ಮೇಲ್ಸೆತುವೆ ಕಾಮಗಾರಿ ತ್ವರಿತವಾಗಿ ಮುಗಿಯಬೇಕು. ರಸ್ತೆಯಲ್ಲಿ ಸಂಚಾರಿ ನಿಯಮ ಅನುಸಾರ ರಸ್ತೆ ವಿನ್ಯಾಸಗೊಳಿಸಬೇಕು. ಬಸ್ ಬೇ, ಬಸ್ ನಿಲ್ದಾಣ, ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿದರು.
ಸರ್ವೀಸ್ ರಸ್ತೆಯಲ್ಲಿ ಬೀದಿದೀಪ, ಸಿಸಿ ಕ್ಯಾಮರಾ ಅಳವಡಿಕೆಯಾಗಬೇಕು. ಅದಕ್ಕೆ ಪೂರಕವಾಗಿ ಬ್ಯಾಟರಿ ಚಾಲಿತ ವ್ಯವಸ್ಥೆಯಾಗಬೇಕು,ರಸ್ತೆ ಬದಿ ಚರಂಡಿಯ ಕೊಳಚೆ ನೀರು ಕೆರೆ, ಕಾಲುವೆ ಸೇರಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು. ಸರ್ವೀಸ್ ರಸ್ತೆ ಬದಿ ಚರಂಡಿ ಮೇಲೆ ಹಾಕಿರುವ ಸ್ಲಬ್’ಗಳು ಪೂರ್ಣವಾಗಿಲ್ಲ. ನಡೆದಾಡಲು ಅನುವಾಗುವಂತೆ ಸ್ಲಬ್ ಅಳವಡಿಸಬೇಕು, ಆರು ಪಥದ ಹೆದ್ದಾರಿ ದಾಟಲು ಅಳವಡಿಸಿರುವ ತಂತಿಬೇಲಿ ಕಿತ್ತು ಹಾಕಿ ಓಡಾಡುವುದನ್ನು ತಡೆಯಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಮುಖಂಡರಾದ ನಾಗರಾಜು, ಸಿದ್ದಪ್ಪ, ಕೀರ್ತಿಕುಮಾರ್, ಜಗದೀಶ್, ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯ ಶಂಕರಪ್ಪ ಇತರರಿದ್ದರು.