ಮಂಡ್ಯ : ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಕುರಿತು ಆಡಿದ ಅಪಮಾನದ ಮಾತುಗಳ ವಿರುದ್ದ ದಲಿತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪ್ರೇರಿತ ಹಾಗೂ ಕಾಂಗ್ರೇಸ್ ನಿಂದ ಹಣ ಪಡೆದು ನಡೆಸಲಾಗುತ್ತದೆ ಎಂದಿರುವ ಮಾಜಿ ಶಾಸಕ ಡಾ. ಕೆ ಅನ್ನದಾನಿ ಹೇಳಿಕೆಯನ್ನು ಸಮಾನ ಮನಸ್ಕರ ವೇದಿಕೆ ಲಕ್ಷ್ಮಣ್ ಚೀರನಹಳ್ಳಿ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ಯಾತೀತ ಜನತಾದಳದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ ಅಮಿತ್ ಶಾ ಹೇಳಿಕೆ ವಿರುದ್ದ ಇಡೀ ಜಾತ್ಯಾತೀತ ಜನತಾದಳವನ್ನು ಹೋರಾಟಕಿಳಿಸುತ್ತಾರೆಂಬ ಯಾವ ವಿಶ್ವಾಸವೂ ನಮಗಿಲ್ಲ.ಜಿಲ್ಲೆಯಲ್ಲಿ ದಲಿತರ ಮೇಲಿನ ಯಾವುದೆ ದೌರ್ಜನ್ಯಕ್ಕೆ ತುಟಿ ಬಿಚ್ಚದ ಈತ ದಲಿತ ಸಂಘಟನೆಗಳ ಹೋರಾಟಗಳಿಗೆ ಕಾಂಗ್ರೆಸ್ ಹಣ ಫೀಡ್ ಮಾಡಿದೆ ಎಂದು ಹೇಳುವ ಮೂಲಕ ದಲಿತ ಸಮುದಾಯದ ಸ್ವಾಭಿಮಾನಿ ಹೋರಾಟವನ್ನು ತಮ್ಮ ಚಿಲ್ಲರೆ ರಾಜಕಾರಣದ ಭಾಗವಾಗಿ ನೋಡುವ ಪ್ರಯತ್ನ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ಮೇಲಿನ ಶಾ ಹೇಳಿಕೆಯನ್ನು ಸಂಭ್ರಮಿಸುವ ಮನುವಾದಿ ಬಿಜೆಪಿ ಮನಸ್ಥಿತಿಗೂ ಅನ್ನದಾನಿ ಹೇಳಿಕೆಗೂ ಯಾವುದೆ ವ್ಯತ್ಯಾಸ ಇಲ್ಲವಾಗಿದೆ,ಸಾಹಿತ್ಯ ಸಮ್ಮೇಳನದಂತ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹುಜನರ ಆಹಾರದ ಹಕ್ಕನ್ನು ನಿರಾಕರಿಸುವ ಅನ್ನದಾನಿ ಯಾವ ಮನುವಾದಿಗೂ ಕಡಿಮೆಯಿಲ್ಲ,ಅಧಿಕಾರಕ್ಕಾಗಿ ಆತ ಯಾರ ಮನೆ ಬಾಗಿಲಾದರೂ ಕಾಯಲಿ.ಆದರೆ ದಲಿತರ ಸ್ವಾಭಿಮಾನಿ ಹೋರಾಟವನ್ನು ಅಪಮಾನಗೊಳಿಸುವ ಹೀನ ಪ್ರಯತ್ನ ನಿಲ್ಲಿಸಬೇಕು.ತಮ್ಮಹೇಳಿಕೆಗೆ ಸಾಕ್ಷ್ಯಾ ಒದಗಿಸಬೇಕು ಇಲ್ಲವೆ ಜಿಲ್ಲೆಯ ದಲಿತ ಸಮುದಾಯ ವನ್ನು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕದಸಂಸದ ಸೋಮನಹಳ್ಳಿ ಅನ್ನದಾನಿ ಮಾತನಾಡಿ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಓಲೈಸುವ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸಿದ್ದಾಂತವೆ ಈ ರಾಜ್ಯದಲ್ಲಿ ಅಂತಿಮ ಎಂದಿದ್ದಾರೆ ಆದರೆ ರಾಜ್ಯ ಮಾತ್ರವಲ್ಲ ದೇಶದ ಒಕ್ಕೂಟ ವ್ಯವಸ್ಥೆಗೆ ಸಂವಿಧಾನ ಕೊಟ್ಟ ಅಂಬೇಡ್ಕರ್ ರವರ ಸಿದ್ದಾಂತ ಗೌರವಾರ್ಹವಾಗಿದೆ.ಆದರೆ ಅಧಿಕಾರದ ಹಪಾಹಪಿಯಿಂದ ಶಾಸಕರು ಇಂತಹ ಬಾಲಬಡುಕ ಹೇಳಿಕೆಗಳನ್ನು ಕೊಡಬಾರದು ಅದೇ ರೀತಿ ತಮ್ಮನ್ನು ಅಧಿಕಾರಕ್ಕೇರಿಸಿದ ಸಿದ್ದಾಂತಕ್ಕೆ ನಿಷ್ಠೆಯಿಂದ ಇರಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಅನ್ನದಾನಿ ಮತ್ತು ಹಾಲಿ ಶಾಸಕ ನರೇಂದ್ರ ಸ್ವಾಮಿ ಬಹಿರಂಗವಾಗಿ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು
ಗೋಷ್ಠಿಯಲ್ಲಿ ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆ ಅಧ್ಯಕ್ಷ ಗಂಗರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ಸಂವಿಧಾನ ಬಳಗದ ಅನಿಲ್ ಕಿರುಗಾವಲು ಇತರರಿದ್ದರು.