ಮಂಡ್ಯ :- ಕೃಷ್ಣರಾಜಸಾಗರದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಕನ್ನಡ ಸೇನೆ ಕರ್ನಾಟಕ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದು ಯೋಜನೆಯನ್ನು ಕೈ ಬಿಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ರವರಿಗೆ ಸೇನೆಯ ಮುಖಂಡರು ಮನವಿ ಸಲ್ಲಿಸಿ ಕೆಆರ್ ಎಸ್ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವ ಸಂಬಂಧ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ 24 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ರೈತರ ಜೊತೆ ಸಭೆ ಮಾಡಿರುವುದನ್ನು ಪ್ರಬಲವಾಗಿ ವಿರೋಧಿಸಲಾಗುವುದು ಎಂದಿದ್ದಾರೆ.
ಈಗಾಗಲೇ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣದ ಯೋಜನೆಯನ್ನು ವಿರೋಧಿಸಿದ್ದೇವೆ ಪಾರ್ಕ್ ನಿರ್ಮಾಣದಿಂದ ಅಣೆಕಟ್ಟೆ,ಪರಿಸರ, ರೈತರು ಅಲ್ಲದೆ ಅಣೆಕಟ್ಟಿನ ವ್ಯಾಪ್ತಿ ಗ್ರಾಮಗಳಿಗೆ ಧಕ್ಕೆಯಾಗುವುದರ ಜೊತೆಗೆ ಗ್ರಾಮಗಳ ಪರಿಸರ,ಕೃಷಿ ಬದುಕು ಪಲ್ಲಾಟವಾಗುತ್ತದೆ
ಸದರಿ ಯೋಜನೆಯಿಂದ ಕೆಆರ್ ಎಸ್ ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಅದೇ ರೀತಿ ಶತಮಾನದ ಅಣೆಕಟ್ಟೆ ಭದ್ರತೆಗೆ ನೇರ ಪರಿಣಾಮವಾಗಲಿದೆ,ಕೃಷಿ ಬದುಕು ನಾಶದ ಜೊತೆಗೆಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಕೆಟ್ಟ ಪರಿಣಾಮಗಳು ಉಂಟಾಗಲಿದೆ ಎಂದು ವ್ಯಕ್ತಪಡಿಸಿದರು.
ಜಲಾಶಯದ ಬಳಿ ಯಾವುದೇ ದಟ್ಟಣೆಯ ಸಾರ್ವಜನಿಕ ಚಟುವಟಿಕೆ ನಡೆಯಬಾರದು, ದಟ್ಟಣೆಯ ವಾಹನಗಳ ಪ್ರವೇಶದಿಂದ ಆಮ್ಲಜನಕ ಉತ್ಪಾದನೆಗೆ ತಡೆಯಾಗಲಿದೆ,ಹಸಿರು ವಲಯ ನಾಶ ವಾಗಲಿದ್ದು ಹಾಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಯೋಜನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು.
ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಚ್ ಸಿ, ಮಹಾಂತಪ್ಪ, ರಂಗಣ್ಣ ಇತರರಿದ್ದರು.