ಮಂಡ್ಯ :- ಆಸ್ತಿ ವಿಚಾರವಾಗಿ ಹೆತ್ತವರ ಪಾಲಿಗೆ ಮಗನೇ ಕಂಟಕಪ್ರಾಯನಾಗಿ ಹೆಂಡತಿ ಮತ್ತು ಮಾವನ ಜೊತೆಗೂಡಿ ಕೊಲೆಗೆ ಯತ್ನಿಸಿದ್ದರೂ ಸಹ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಬೇಸತ್ತ ಹೆತ್ತವರು ದಯಾಮರಣ ಕೋರಿರುವ ಘಟನೆ ನಡೆದಿದೆ.
ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿಯ ಕಾಳೇನಹಳ್ಳಿ ಗ್ರಾಮದ ಲೇಟ್ ಚಿಕ್ಕ ಕುನ್ನೆಗೌಡರ ಮಗ ಜವರೇಗೌಡ ಮತ್ತು ಇವರ ಪತ್ನಿ ಭಾಗ್ಯಮ್ಮ ದಯಾಮರಣ ಕಲ್ಪಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂವರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು ಹೊಂದಿರುವ ದಂಪತಿಗಳಾದ ನಮಗೆ ಪಿತ್ರಾರ್ಜಿತ ನಾಲ್ಕೂವರೆ ಎಕರೆ ಮತ್ತು ಸ್ವಯಾರ್ಜಿತ ಎರಡು ಎಕರೆ ಸೇರಿ ಒಟ್ಟು ಆರೂವರೆ ಎಕರೆ ಜಮೀನು ಇದ್ದು, ನಾಲ್ವರಿಗೆ ಮದುವೆಯಾಗಿದ್ದು ಕಿರಿಯ ಮಗನಿಗೆ ಮದುವೆ ಆಗಿರುವುದಿಲ್ಲ, ಹಿರಿಯ ಮಗ ವಿಜಯಕುಮಾರ್, ಎರಡನೆಯ ಮಗ ಕೆ. ಜೆ ನೀಲೇ ಗೌಡ ಬೇರೆ ಮನೆಯಲ್ಲಿ ವಾಸಿಸುತ್ತಿದ್ದು ಮಗಳು ಕೆ.ಜೆ. ವರಲಕ್ಷ್ಮಿ ಮೂರು ಜನರು ಇದ್ದೇವೆ,
ಹಿರಿಯ ಮಗ ವಿಜಯಕುಮಾರ್ ನಮ್ಮ ಗಮನಕ್ಕೆ ಬಾರದಂತೆ ಅಕ್ರಮವಾಗಿ 130 ಗುಂಟೆ ಜಮೀನನ್ನು ಅವರ ಹೆಂಡತಿ ಅಭಿಲಾಷ ಹೆಸರಿಗೆ ಅಕ್ರಮವಾಗಿ ಕ್ರಯ ಮಾಡಿಸಿಕೊಂಡಿದ್ದಾರೆ, ಕೆ.ಜೆ ನೀಲೆಗೌಡನಿಗೆ 13 ಗುಂಟೆ ಜಮೀನನ್ನು ನೀಡಿದ್ದೇವೆ, ಗಂಡು ಮಕ್ಕಳು ನಮ್ಮನ್ನು ಸರಿಯಾಗಿ ನೋಡಿಕೊಳ್ಳದ ಹಿನ್ನೆಲೆಯಲ್ಲಿ ಒಟ್ಟು ಆಸ್ತಿಯಲ್ಲಿ ಯಾರಿಗೂ ಕ್ರಮವಾಗಿ ಹಂಚಿಕೆ ಮಾಡಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಆಸ್ತಿಯಲ್ಲಿ ಹೆಚ್ಚಿನ ಪಾಲು ಬೇಕು ಎಂದು ಕೆ ಜೆ ನೀಲೇ ಗೌಡ ಪತ್ನಿ ಕೀರ್ತನ ಹಾಗೂ ಮಾವ ನಾಗರಾಜು ಜೊತೆಗೂಡಿ ಮನೆಯ ಬಳಿ ಬಂದು ಎರಡು ವರ್ಷದಿಂದ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಾ ಬಂದಿದ್ದಾರೆ, ನಮ್ಮ ಜಮೀನಿನಲ್ಲಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಣಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಡಿಸೆಂಬರ್ 17ರಂದು ಪತ್ನಿ ಕೀರ್ತನ,ಮಾವ ನಾಗರಾಜು ಜೊತೆಗೂಡಿ ಬಂದ ಕೆ ಜೆ ನೀಲೇ ಗೌಡ ತಾಯಿ ಭಾಗ್ಯಮರ ಮೇಲೆ ಹಲ್ಲೆ ಮಾಡಿ ಕಲ್ಲು ಎತ್ತಿ ಹಾಕಿದ ಪರಿಣಾಮ ಎಡಗೈ ಮೂಳೆ ಮತ್ತು ಬಲಗಾಲಿನ ಮೂಳೆ ಮುರಿದಿದ್ದು, ಕೊಲೆ ಮಾಡುವ ಯತ್ನ ಮಾಡಿದ್ದಾರೆ, ಈ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹ ಕಾಟಾಚಾರಕ್ಕೆ ದೂರನ್ನು ದಾಖಲಿಸಿಕೊಂಡ ಪೊಲೀಸರು ದೌರ್ಜನ್ಯ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸಂತ್ರಸ್ತರಿಗೆ ರಕ್ಷಣೆಯನ್ನು ನೀಡಿಲ್ಲ ಎಂದು ತಿಳಿಸಿದರು.
ಪೋಲಿಸ್ ಠಾಣೆಗೆ ದೂರು ನೀಡಿದ ನಂತರವೂ ಮೂರು – ನಾಲ್ಕು ಬಾರಿ ಮನೆಯ ಬಳಿ ಬಂದ ಕೆ ಜೆ ನಿಲೇಗೌಡ , ಕೀರ್ತನ, ನಾಗರಾಜು ಮಾರಕಾಸ್ರ ದಿಂದ ನಮ್ಮನ್ನು ಕೊಲೆ ಮಾಡಲು ಯತ್ನಿಸಿದ್ದಾರೆ, ಅದೃಷ್ಟ ವಶಾತ್ ಪ್ರಾಣಪಾಯದಿಂದ ಪಾರಾಗಿದ್ದೇವೆ ಎಂದು ಹೇಳಿದರು.
ಸ್ಥಳೀಯ ಪೊಲೀಸರಿಂದ ಯಾವುದೇ ನ್ಯಾಯ ಹಾಗೂ ಸೂಕ್ತ ಪೊಲೀಸ್ ರಕ್ಷಣೆ ದೊರಕಿರುವುದಿಲ್ಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮನ್ನು ಕೊಲೆಗೆ ಯತ್ನಿಸಿರುವ ಮಗ ನೀಲೇಗೌಡ, ಸೊಸೆ ಕೀರ್ತನ ಮತ್ತು ನಾಗರಾಜು ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕು ಇಲ್ಲದಿದ್ದರೆ ಜವರೇಗೌಡ ಮತ್ತು ಭಾಗ್ಯಮ್ಮ ದಂಪತಿಗಳಿಗೆ ದಯಾಮರಣ ಹೊಂದಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.