-0.7 C
New York
Saturday, February 1, 2025

Buy now

spot_img

ಸಂವಿಧಾನದ ಮೌಲ್ಯವನ್ನು ಪ್ರತಿಯೊಬ್ಬರು ಅರಿಯಿರಿ : ಸಚಿವ ಎನ್ ಚೆಲುವರಾಯಸ್ವಾಮಿ

ಮಂಡ್ಯ :- ಸಂವಿಧಾನದ ಪೂರ್ವ ಪ್ರಸ್ತಾವನೆಯಲ್ಲಿರುವ ಮೌಲ್ಯಯುತ ಅಂಶಗಳನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರಿಗೂ ಮಹತ್ವವಾದ ಮತ್ತು ಪವಿತ್ರವಾದ ದಿನ. ಎಲ್ಲ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ

ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನೇಕ ಮಹನೀಯರುಗಳು, ಮಹಾತ್ಮ ಗಾಂಧೀಜಿ, ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಲಾಲ ಲಜಪತರಾಯ್, ಜವಹಾರಲಾಲ್ ನೆಹರು, ಸುಭಾಷ್‌ಚಂದ್ರ ಬೋಸ್ ಮುಂತಾದವರ ನೇತೃತ್ವದಲ್ಲಿ ನಡೆಸಿದ ಸ್ವಾತಂತ್ರ‍್ಯ ಹೋರಾಟಗಾರರ, ತ್ಯಾಗ-ಬಲಿದಾನ ಫಲವಾಗಿ 1947 ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ದೊರಕಿತು ಎಂದರು.
ಸ್ವಾತಂತ್ರ‍್ಯಗೊಂಡ ನಂತರ, ಇಡೀ ದೇಶವನ್ನು ಭೌಗೋಳಿಕವಾಗಿ, ಭಾಷಿಕವಾಗಿ ಒಗ್ಗೂಡಿಸುವ ಅನಿವಾರ್ಯತೆ ಉದ್ಭವಿಸಿತು. ಜೊತೆಗೆ ಏಕರೂಪದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆಯನ್ನು ಬಲಪಡಿಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತ ಸಂವಿಧಾನ ಕರಡು ರಚನಾ ಸಮಿತಿ ಯನ್ನು ರಚಿಸಲಾಯಿತು ಎಂದರು
ಎರಡು ವರ್ಷಗಳ ಸುಧೀರ್ಘ ಅವಲೋಕನ ಮತ್ತು ಚರ್ಚೆಯ ನಂತರ, ಅಂತಿಮವಾಗಿ 26 ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ||ಬಿ.ಆರ್. ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವನ್ನು ದೇಶಾದ್ಯಂತ 26ನೇ ಜನವರಿ 1950 ರಿಂದ ಜಾರಿಗೆ ತರಲಾಯಿತು ಎಂದರು.
ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್. ಅವರ ಅವಿರತ ಪ್ರಯತ್ನ ಹಾಗೂ ಪಾಂಡಿತ್ಯದಿಂದಾಗಿ ನಮಗೆ ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಉತ್ತಮವಾದ ಲಿಖಿತ ಸಂವಿಧಾನ ದೊರೆತಿದೆ ಎಂದರು.
ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಹಾಗೂ: ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ: ವಿಚಾರ, ಅಭಿವ್ಯಕ್ತಿ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ‍್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ದೊರೆಯುವಂತೆ ಮಾಡಲು ವ್ಯಕ್ತಿಗೌರವವನ್ನು, ರಾಷ್ಟ್ರದ ಏಕತೆ ಹಾಗೂ ಅಖಂಡತೆಯನ್ನು ಖಾತ್ರಿ ಮಾಡಿ ಅವರಲ್ಲಿ ಎಲ್ಲರಲ್ಲೂ ಭ್ರಾತೃತ್ವ ಭಾವನೆಯನ್ನು ವೃದ್ಧಿಗೊಳಿಸುವುದಕ್ಕಾಗಿ,ದೃಢ ಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆಯಲ್ಲಿ 1949ನೇ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಎಂದರು.
ಸಂವಿಧಾನದ ಆಶಯಗಳಿಗನುಗುಣವಾಗಿ ದೇಶವನ್ನು ಮುನ್ನಡೆಸಿದ, ಭಾರತದ ಹದಿನಾಲ್ಕನೇ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ಹಾಗೂ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಇವರ ನಿಧನ ನಿಜಕ್ಕೂ ದೇಶಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದೇ ಭಾವಿಸುತ್ತೇನೆ ಎಂದರು.
ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯಡಿ, ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದು ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ಇಂದು ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಅದರಲ್ಲೂ ಜನ ಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಅರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯೊಂದಿಗೆ ಐದುಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರಕ್ಕಿದೆ ಎಂದರು.
ಶಕ್ತಿ ಯೋಜನೆ* ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು “ಶಕ್ತಿ ಯೋಜನೆ”ಯನ್ನು ಜಾರಿಗೆ ತಂದಿದ್ದು. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 10.83 ಕೋಟಿ ಟಿಕೆಟ್‌ಗಳನ್ನು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ನೀಡಿ ಒಟ್ಟು ರೂ.274 ಕೋಟಿ ವೆಚ್ಚ ಭರಿಸಲಾಗಿದೆ,ಅನ್ನಭಾಗ್ಯ ಪ್ರತಿಯೊಬ್ಬರಿಗೂ ಆಹಾರದ ಕೊರತೆ ನೀಗಿಸುವ ಉದ್ದೇಶದಿಂದ ನಮ್ಮ ಸರ್ಕಾರ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿಯನ್ನು ದಾಸ್ತಾನು ರೂಪದಲ್ಲಿ ಹಾಗೂ 5 ಕೆ.ಜಿ ಅಕ್ಕಿಯನ್ನು ನಗದು ರೂಪದಲ್ಲಿ ನೀಡಲಾಗುತ್ತಿದ್ದು, ಈವರೆಗೆ ಒಟ್ಟು 4,43,292 ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ”ಯಡಿ ರೂ.354.78 ಕೋಟಿ ಹಣವನ್ನು ನೇರ ನಗದು ಪಾವತಿ ಮೂಲಕ ನೀಡಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ, 5,02,889 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಡಿಸೆಂಬರ್ ಅಂತ್ಯಕ್ಕೆ ವಿದ್ಯುತ್‌ನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ ರೂ. 278.48 ಕೋಟಿಗಳನ್ನು ಪಾವತಿಸಲಾಗಿದೆ,ಗೃಹಲಕ್ಷ್ಮಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ 4,48,525 ಮಹಿಳೆಯರಿಗೆ ತಲಾ ರೂ.2,000 ಗಳಂತೆ ಒಟ್ಟು ರೂ.1308 ಕೋಟಿಗಳನ್ನು ಪಾವತಿಸಲಾಗಿದೆ ಅದೇ ರೀತಿ ಯುವನಿಧಿ ಯೋಜನೆಯ ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಸಿಗದ ಡಿಪ್ಲೋಮೋ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ ರೂ.1,500 ಮತ್ತು ರೂ.3,000ಗಳನ್ನು ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಅವಧಿಯವರೆಗೆ ನೀಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ 3,592 ಅಭ್ಯರ್ಥಿಗಳಿಗೆ “ಯುವನಿಧಿ” ಯೋಜನೆಯಡಿ ರೂ.4.46 ಕೋಟಿ ಹಣ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ದೇವರ ಕೃಪೆಯಿಂದ ಉತ್ತಮ ಮಳೆಯಾಗಿದ್ದು, ಇದೇ ಮೊದಲ ಬಾರಿಗೆ 92 ವರ್ಷಗಳ ಇತಿಹಾಸದಲ್ಲಿಯೇ ಕೃಷ್ಣರಾಜಸಾಗರ ಜಲಾಶಯವು ಒಂದು ವರ್ಷದಲ್ಲಿ ನಿರಂತರವಾಗಿ 154 ದಿನಗಳು ಭರ್ತಿಯಾಗಿದ್ದು, ರೈತರಿಗೆ ಹಾಗೂ ಜಿಲ್ಲೆಯ ಜನತೆಗೆ ಆಶಾದಾಯಕ ವಿಷಯವಾಗಿದೆ,ರೈತರ ಬೇಡಿಕೆ ಮತ್ತು ಅಪೇಕ್ಷೆಯಂತೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಬೇಸಿಗೆ ಬೆಳೆಗಳಿಗೂ ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ನೀರನ್ನು ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಜರುಗಿಸಲಾಗಿದೆ. ಇದಕ್ಕಾಗಿ ಹನಕೆರೆಯ ಬಳಿ 7.90ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮೋದನೆ ದೊರಕಿರುತ್ತದೆ ಹಾಗೂ ಬಿ.ಗೌಡಳ್ಳಿಯ ಬಳಿ ರೂ.6.7 ಕೋಟಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣಕ್ಕೆ ಅನುಮೋದನೆ ದೊರಕಿರುತ್ತದೆ ಎಂದರು.
ಸರ್ಕಾರದಿಂದ ವಿಪತ್ತು ಉಪಶಮನ ನಿಧಿಯಡಿ 5.54 ಕೋಟಿ ಅನುದಾನಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ಈ ಅನುದಾನದಲ್ಲಿ ವಿಪತ್ತು ಸಂದರ್ಭದಲ್ಲಿ ಆಗುವಂತಹ ಅಪಾಯವನ್ನು ತಗ್ಗಿಸಲು ನಾಲ್ಕು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದರು.
ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬಹಳ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕನ್ನಡಿಗರಲ್ಲಿ ಒಂದು ಬಗೆಯ ಸಂಚಲನ ಸೃಷ್ಟಿಸಿದೆ. ಇದಕ್ಕೆ ಎಲ್ಲರ ಸಾಂಘಿಕ ಸಹಕಾರ, ಪ್ರೀತಿ ಮತ್ತು ಬೆಂಬಲ ಕಾರಣವಾಗಿದೆ. ಈ ಸಮ್ಮೇಳನದಿಂದ ನಮಗೆ ಕನ್ನಡ ನಾಡು-ನುಡಿ ಸಾಹಿತ್ಯ ಸಂಸ್ಕೃತಿಯ ಬಗೆಗೆ ಜನಮನದಲ್ಲಿರುವ ಅಪಾರ ಪ್ರೀತಿ, ಗೌರವ, ಅಭಿಮಾನದ ದರ್ಶನವಾಗಿದೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಅಸ್ಮಿತೆಯ ಅನಾವರಣವಾಗಿದೆ,ಈ ಸಮ್ಮೇಳನಕ್ಕೆ ಅಂದಾಜು 7 ರಿಂದ 8 ಲಕ್ಷ ಜನ ಭಾಗವಹಿಸಿ, ಸಾಹಿತ್ಯ ಸಮ್ಮೇಳನದ ಗೋಷ್ಟಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸಾಹಿತ್ಯದ ರಸ ದೌತಣ ಸವಿದಿದ್ದಾರೆ ಎಂದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿರುವ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ, ಸಮ್ಮೇಳನದಲ್ಲಿ ಉಳಿತಾಯವಾದ ಮೊತ್ತ ಹಾಗೂ ಸರ್ಕಾರದಿಂದ ವಿಶೇಷ ಅನುದಾನವನ್ನು ಪಡೆದು, ಕನ್ನಡ ಭವನ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು,ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು.1.17 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ ಎಂದರು.
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯಕ್ಕೆ ಅನ್ನದಾಸೋಹ ಭವನವನ್ನು 200 ಲಕ್ಷಗಳ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಶ್ರೀ ಕ್ಷೇತ್ರದಲ್ಲಿ ಅನ್ನ ದಾಸೋಹ ಪ್ರಾರಂಭಿಸಲಾಗಿದೆ. ವಾರದ ಪ್ರತಿ ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ದಾಸೋಹ ಕಾರ್ಯ ನಡೆಸಲಾಗುತ್ತಿದೆ ಎಂದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕ್ರಿ.ಶ. 950 ರಲ್ಲಿ ಸ್ಥಾಪಿತವಾದ ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಆತಗೂರು “ಕಾಳಿ” ಎಂಬ ಯುದ್ಧದ ಬೇಟೆನಾಯಿ ಸ್ಮಾರಕದ ಆತಗೂರು ಶಾಸನದ ಪ್ರತಿಕೃತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಮ್ಮೇಳನದ ಆರಂಭಕ್ಕೂ ಮುನ್ನ ಸಾಹಿತಿಗಳ ಕೋರಿಕೆಯಂತೆ ಪುರಾತತ್ವ ಇಲಾಖೆಯ ಸಹಕಾರದೊಂದಿಗೆ ಡಾ.ನಿರ್ಮಲಾನಂದನಾಥ ಸ್ವಾಮಿ ಸಾನಿಧ್ಯದಲ್ಲಿ ಅನಾವರಣಗೊಳಿಸಲಾಗಿದೆ, ಕಂದಾಯ ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಂತೆ, ಕಂದಾಯ ನ್ಯಾಯಾಲಯಗಳಲ್ಲಿ ಸುಮಾರು 14 ಸಾವಿರಕ್ಕೂ ಹೆಚ್ಚು ನ್ಯಾಯಾಲಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು‌.
ಭೂ ಮಂಜೂರಾತಿಯಾಗಿ ಅನೇಕ ವರ್ಷಗಳಿಂದ ಪೋಡಿ ದುರಸ್ತಿಯಾಗದ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದುರಸ್ತಿ ಮಾಡಿಕೊಡಲು ಈಗಾಗಲೇ ಚಾಲನೆಯನ್ನು ನೀಡಿ , ದುರಸ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆಕಂದಾಯ ಇಲಾಖೆಯ ಆಡಳಿತವನ್ನು ಸದೃಢ ಗೊಳಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಖಾಲಿ ಇರುವ 60 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.
ಕಂದಾಯ ದಾಖಲೆಗಳ ಸುರಕ್ಷತೆಯ ಉದ್ದೇಶದಿಂದ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಇದರಂತೆ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲು, ಎಲ್ಲಾ ತಾಲ್ಲೂಕುಗಳಲ್ಲೂ “ಭೂ ಸುರಕ್ಷಾ ಯೋಜನೆ”ಯನ್ನು ಪ್ರಾರಂಭಿಸಲಾಗಿದೆ‌,ಕೆಎಸ್‌ಆರ್‌ಟಿಸಿ ಎಲ್ಲಾ ನೌಕರರಿಗೆ ಅನುಕೂಲವಾಗುವಂತೆ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ ಎಂಬ ನಗದು ರಹಿತ ಚಿಕಿತ್ಸಾ ಯೋಜನೆಗೆ ಜನವರಿ 06 ರಂದು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿರುತ್ತಾರೆ. ನಿಗಮದ ಎಲ್ಲಾ ನೌಕರರು ಮತ್ತು ಅವರ ಅವಲಂಬಿತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ಸಂಬAಧ ಕರ್ನಾಟಕದಾದ್ಯಂತ ಸುಮಾರು 275ಕ್ಕೂ ಅಧಿಕ ಖಾಸಗಿ/ಸರ್ಕಾರಿ ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಳ್ಳಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಕೆ.ಎಸ್.ಆರ್.ಟಿ.ಸಿ ನೌಕರರ ಕುಟುಂಬದವರಿಗೆ ರೂ.1 ಕೋಟಿ ವಿಮೆ ಸೌಲಭ್ಯ ನೀಡುವ ಯೋಜನೆಯನ್ನು ಸಹ ಜಾರಿಗೆ ತರಲಾಗಿದೆ ಎಂದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಟರ್ಷಿಯರಿ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಹಾಗೂ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಸೃಜನೆಗಾಗಿ ಅಗತ್ಯ ಕ್ರಮವಹಿಸಲಾಗುತ್ತಿದೆ,ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸಲು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ರೂ. 180 ಲಕ್ಷ ದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕಬ್ಬು ಕಟಾವು ಯಂತ್ರವನ್ನು ಈ ಯೋಜನೆಯಡಿ ಸಹಾಯಧನದಲ್ಲಿ ವಿತರಿಸಲಾಗಿದೆ ಎಂದರು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ರೂ.381.3 ಲಕ್ಷಗಳಲ್ಲಿ, ಈಗಾಗಲೇ 251 ಫಲಾನುಭವಿಗಳಿಗೆ ರೂ. 144.5 ಲಕ್ಷಗಳ ಸಹಾಯಧನದ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ,ಪ್ರಸಕ್ತ ಸಾಲಿನಲ್ಲಿ ಮಣ್ಣು ಆರೋಗ್ಯ ಅಭಿಯಾನದಡಿ 15000 ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಿ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ರೈತರಿಗೆ ವಿತರಿಸಲು ಕ್ರಮವಹಿಸಲಾಗಿದ್ದು, ಜಿಲ್ಲೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.
ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್,ಅನಿಲ ಚಿತಾಗಾರವನ್ನು ಮಂಡ್ಯ ನಗರ ಸಭೆ ವ್ಯಾಪ್ತಿಯಲ್ಲಿ 4 ಕೋಟಿ ಅನುದಾನದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು,ಮAಡ್ಯದಲ್ಲಿ ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೇನ್ನುವ ಬಹುದಿನಗಳ ಕನಸು ನನಸಾಗುವ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಜನರ ಬಹುದಿನಗಳ ಕನಸನ್ನು ಸಾಕಾರಗೊಳಿಸಿದ್ದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಹದ್ಯೋಗಿಗಳನ್ನು ವಿಶೇಷವಾಗಿ ಅಭಿನಂಧಿಸುತ್ತೇನೆ ಎಂದರು.
ಆರ್.ಐ.ಡಿ.ಎಫ್- ಟ್ರಾಂಚ್ 3 0ರಡಿ ಮದ್ದೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರಕಿದೆ,ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಸರ್ಕಾರದಿಂದ ಕಳೆದ ವರ್ಷ ರೂ.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾರ್ಖಾನೆ ಯಶಸ್ವಿಯಾಗಿ ಈ ವರ್ಷ 2,01,000 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿರುತ್ತದೆ. ಮೈಶುಗರ್‌ನಿಂದ ಬಹುದಿನಗಳಿಂದ ಬಾಕಿ ಇದ್ದ ವಿದ್ಯುತ್ ಬಿಲ್ ಬಾಕಿ ಮೊತ್ತ ರೂ. 54 ಕೋಟಿಯನ್ನು ಮನ್ನಾ ಮಾಡಲಾಗಿದೆ ಎಂದರು
ಮಂಡ್ಯ ಜಿಲ್ಲೆಯಲ್ಲಿ ಆಗಿರುವ ಸಾಧನೆಗಳೇ ಸರ್ಕಾರದ ಯಶಸ್ಸಿನ ಕೈಗನ್ನಡಿ. ಕಣ್ಣಿಗೆ ಕಾಣುವಂಥ ಅಭಿವೃದ್ಧಿಗಳೇ ನಮಗೆ ಶ್ರೀರಕ್ಷೆ. ಅಭಿವೃದ್ಧಿಯೇ ನಮ್ಮ ಮಾತಾಗಬೇಕು ಎಂದು ನಂಬಿದ್ದೇನೆ. ಹೀಗಾಗಿ, ಜಿಲ್ಲೆಯಲ್ಲಿನ ಅಭಿವೃದ್ಧಿ ಚಿತ್ರಗಳು ಮುಂದಿನ ದಿನಗಳಲ್ಲಿ ಯಶಸ್ಸಿನ ಬಿಂದುಗಳಾಗಲಿವೆ ಎಂದರು.
ಶಾಸಕ ರವಿಕುಮಾರ್‌ ಪಿ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಪ್ರಕಾಶ್, ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles