ಮಂಡ್ಯ :- ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ನೀತಿ ಹಾಗೂ ಮೈಕ್ರೋ ಫೈನಾನ್ಸ್ ಗಳ ಶೋಷಣೆ ವಿರುದ್ಧ ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಸಮಿತಿ ನೇತೃತ್ವದಲ್ಲಿ ರೈತನೊಬ್ಬ ನೇಣು ಕುಣಿಕೆಗೆ ಕೊರಳೊಡ್ಡಿದ ಅಣಕು ಶವಯಾತ್ರೆಯೊಂದಿಗೆ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ರೈತರು, ಮಹಿಳೆಯರು, ಬಡ ಜನರ ಬದುಕಿಗೆ ಮಾರಕವಾಗಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾ ಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ರೈತರ ಮೇಲಿನ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ, ರೈತರನ್ನು ಸಾಲ ಮುಕ್ತಗೊಳಿಸುವ ಯೋಜನೆ ರೂಪಿಸದ ಆಳುವ ಸರ್ಕಾರಗಳು ವಿಜ್ಞಾನ, ತಂತ್ರಜ್ಞಾನ,ಯಾಂತ್ರಿಕತೆ ಬಗ್ಗೆ ಮಾತನಾಡುತ್ತಾ ರೈತರ ಸ್ವಾವಲಂಬನೆಗೆ ಒತ್ತು ನೀಡದೆ ಉದ್ಯಮಿಗಳು ಕಾರ್ಪೊರೇಟ್ ಕುಳಗಳು ಹಾಗೂ ಶ್ರೀಮಂತರಿಗೆ ಉದಾರ ಸಾಲ ನೀಡುತ್ತಿವೆ ಆದರೆ ರೈತರಿಗೆ ಸಾಲ ಸಿಗುತ್ತಿಲ್ಲ, ಬೆಳೆಯ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಕನಿಷ್ಠ ಬೆಂಬಲ ಬೆಲೆ ಖಾತರಿ ಯಾಗದೆ ಕೃಷಿ ಕ್ಷೇತ್ರ ಕಡೆಗಣನೆಯಾಗುತ್ತಿದ್ದು, ಕೃಷಿ ಕಾಯ್ದೆಗಳು ಮಾರಕವಾಗಿ ಪರಿಣಮಿಸಿದ್ದು ಇಂತಹ ಒತ್ತಡದ ಜೀವನದಲ್ಲಿ ರೈತರು ಮಹಿಳೆಯರು ಮತ್ತು ಬಡವರು ಜೀವನೋಪಾಯಕ್ಕಾಗಿ ಖಾಸಗಿ ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆಯುತ್ತಿದ್ದು ಆದರೆ ಬಡ್ಡಿ ಚಕ್ರಬಡ್ಡಿ ಯಿಂದ ಸಾಲ ಮರುಪಾವತಿಸಲು ಸಾಧ್ಯವಾಗದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಊರು ತೊರೆಯುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ತಂದೊಡ್ಡಿರುವ ಕಠಿಣ ಪರಿಸ್ಥಿತಿಯಲ್ಲಿ ಸಾಲಗಾರರ ಮೇಲಿನ ಶೋಷಣೆ ತಡೆಯಲು ರಾಷ್ಟ್ರೀಕೃತ ಬ್ಯಾಂಕ್ ಸಹಕಾರಿ ಸಂಘಗಳಲ್ಲಿ ಸುಲಭ ಮಾರ್ಗವಾಗಿ ಸಾಲ ದೊರಕಲು ಸಾಲ ನೀತಿ ರೂಪಿಸಬೇಕು, ರಾಷ್ಟ್ರೀಕೃತ ಬ್ಯಾಂಕ್ ಗಳು ಪ್ರತೀ ಎಕರೆಗೆ 5 ಲಕ್ಷ ರೂ ದೀರ್ಘಾವಧಿ ಸಾಲವನ್ನ ಸರಳ ದಾಖಲಾತಿಯಲ್ಲಿ ನೀಡಬೇಕು, ಕೃಷಿ ಸಾಲದ ಬಡ್ಡಿ ದರವನ್ನು ಕಡಿತ ಮಾಡಬೇಕು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಶೂನ್ಯ ದರದಲ್ಲಿ ಬೆಲೆ ವಿಮೆ ಸೌಲಭ್ಯ ಕಲ್ಪಿಸಬೇಕು, ಕೃಷಿ ಉಪಕರಣ, ರಸ ಗೊಬ್ಬರ, ಬಿತ್ತನೆ ಬೀಜ, ಔಷಧಿಗಳ ಮೇಲಿನ ಜಿಎಸ್ಟಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆ ಸಾಲ ಸೇರಿದಂತೆ ಇತರ ಸಾಲ ಪಡೆಯಲು ಎದುರಿಸುತ್ತಿರುವ ಸಿಬಿಲ್ ತಾಂತ್ರಿಕ ತೊಡಕು ಮತ್ತು ಓಟಿಎಸ್ ಅಡಿಯಲ್ಲಿ ಮರುಪಾವತಿಸಿದವರಿಗೆ ಹೊಸ ಸಾಲ ಪಡೆಯಲು ಅಡ್ಡಿಯಾಗುತ್ತಿರುವ ಸಮಸ್ಯೆಯನ್ನು ಸರಿಪಡಿಸಿ ಬೆಳೆ,ಶೈಕ್ಷಣಿಕ, ಗೃಹ ಹಾಗೂ ಅಭಿವೃದ್ಧಿ ಸಾಲ ದೊರಕಲು ಕ್ರಮ ವಹಿಸಬೇಕು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯ, ದಬ್ಬಾಳಿಕೆ, ಅವಾಚ್ಯ ಶಬ್ದ ಬಳಕೆ ಮಾಡಿ ಅವಮಾನಿಸುತ್ತಿರುವುದು ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಿದ್ದು, ರಾಜ್ಯ ಸರ್ಕಾರ ಸಾಲ ವಸೂಲಾತಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಿಮಿನಲ್ ಮೊಕದಮ್ಮೆದಾಖಲಿಸಿ ಮೈಕೋ ಫೈನಾನ್ಸ್ ಗಳ ಮೇಲೆ ನಿಯಂತ್ರಣ ಸಾಧಿಸಬೇಕು, ಕಬ್ಬು ಬೆಳೆಯನ್ನು ವಿಮೆ ವ್ಯಾಪ್ತಿಗೆ ತರಬೇಕು, ಪ್ರತಿಟನ್ ಕಬ್ಬಿಗೆ 5200 ರೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು,ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿ ಪಡಿಸಲು ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಮುಖಂಡರಾದ ಇಂಡವಾಳು ಚಂದ್ರಶೇಖರ್, ಕೆ ನಾಗೇಂದ್ರ ಸ್ವಾಮಿ,ಎಸ್ ಮಂಜೇಶ್ ಗೌಡ,ಅಣ್ಣೂರು ಮಹೇಂದ್ರ,ಶಿವಳ್ಳಿ ಚಂದ್ರಶೇಖರ್,ರಾಮಕೃಷ್ಣಯ್ಯ,ಸೀತಾರಾಮಯ್ಯ, ಕೆ ಜಿ ಉಮೇಶ್,ಕೀಳಘಟ್ಟ ನಂಜುಂಡಯ್ಯ, ಸೋ ಶಿ ಪ್ರಕಾಶ್,ಪ್ರಭುಲಿಂಗು, ಕೆ ಪಿ ಪುಟ್ಟಸ್ವಾಮಿ, ಗುಡಿ ದೊಡ್ಡಿ ಶಿವಲಿಂಗಯ್ಯ, ಕುದರಗುಂಡಿ ನಾಗರಾಜು, ಹಳುವಾಡಿ ಶ್ರೀನಿವಾಸ್ ನೇತೃತ್ವ ವಹಿಸಿದ್ದರು.