ಮಂಡ್ಯ :- ಕಾರ್ಪೊರೇಟ್ ಲೂಟಿಗೆ ಅವಕಾಶ ಕಲ್ಪಿಸಿರುವ ಒಕ್ಕೂಟ ಸರ್ಕಾರದ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ಬಜೆಟ್ ನ ಪ್ರತಿ ದಹಿಸಿ ಸಿಐಟಿಯು ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದರು.
ನಗರದ ಮಹಾವೀರ ಸರ್ಕಲ್ ನಲ್ಲಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಒಕ್ಕೂಟ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶ ಬಹಳ ಗಂಭೀರವಾದ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೋವಿಡ್ ಸಂದರ್ಭದ ಅರ್ಥಿಕ ಸಂಕಷ್ಟವೂ ಈ ಬಿಕ್ಕಟ್ಟು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗ ಪ್ರಮಾಣವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಇರುವಂತಹ ಸಂದರ್ಭದಲ್ಲಿ, ದುಡಿಯುವ ಜನರು ಬಹಳ ದೊಡ್ಡ ಪ್ರಮಾಣದ ಬೆಲೆ ಏರಿಕೆಯಿಂದಾಗಿ ಜೀವನ ನಡೆಸಲು ಬಹಳ ಸಂಕಟವನ್ನು ಅನುಭವಿಸುತ್ತಿರುವಾಗ ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳ, ಜಾಗತಿಕ ಹಣಕಾಸು ಬಂಡವಾಳದ ಹಿತಕಾಯಲು ಬಡವರ ಮೇಲೆ ವಿಪರೀತ ಪ್ರಮಾಣದ ತೆರಿಗೆ ಭಾರವನ್ನು ಬಜೆಟ್ ಹೊರಿಸಿದೆ ಎಂದು ಕಿಡಿಕಾರಿದರು
ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ ಖಾತರಿ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಆಹಾರ ಭದ್ರತೆ,ರಸಗೊಬ್ಬರ ಸಬ್ಸಿಡಿ ಗೆ ಈ ಬಜೆಟ್ ನಲ್ಲಿ ತೀವ್ರವಾದ ಹಣ ಕಡಿತ ಮಾಡಲಾಗಿದೆ.
ಸಾರ್ವಜನಿಕ ವಿಮೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಸಂಪೂರ್ಣ ಖಾಸಗೀಕರಿಸುವ ,ಜಾಗತಿಕ ಅರ್ಥಿಕ ಬಿಕ್ಕಟ್ಟು ಸಂದರ್ಭದಲ್ಲಿಯೂ ದೇಶವನ್ನು ರಕ್ಷಿಸಿದ ಸಾರ್ವಜನಿಕ ಕ್ಷೇತ್ರದ ಹಣಕಾಸು ವಲಯವನ್ನು ದೇಶ ಹಾಗೂ ವಿದೇಶಗಳ ಬಂಡವಾಳಕ್ಕೆ ಮುಕ್ತಗೊಳಿಸಿ ಬಹಳ ದೊಡ್ಡ ಅಪಾಯವನ್ನು ಆಹ್ವಾನಿಸಲಾಗಿದೆ.
ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಹಣವನ್ನು ಮೀಸಲಿಡಲಿಲ್ಲ ಹಾಗೂ ಈ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆಗಳ ಪ್ರಸ್ತಾಪಗಳಿಲ್ಲ. ಜೊತೆಗೆ ರೈತರ ಸಾಲ ಮನ್ನಾ ಹಾಗೂ ಎಮ್ ಎಸ್ ಪಿ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸುವ ಪ್ರಸ್ತಾಪದಿಂದ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು
ಸಂಘಟನೆಯ ಸಿ ಕುಮಾರಿ, ಎಂ ಶಿವಕುಮಾರ್ ನೇತೃತ್ವ ವಹಿಸಿದ್ದರು.