ಮಂಡ್ಯ :- ಭಾರತ ಸಂವಿಧಾನದ ಆಶಯಗಳ ವಿರೋಧಿಯಾದ,ಶೋಷಿತ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್’ ಖಂಡಿಸಿ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟರ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮಿಸಲಿರಿಸುವ ರಾಷ್ಟ್ರೀಯ ಪರಿಶಿಷ್ಟ ಜಾತಿ,ಪಂಗಡಗಳ ಉಪ-ಯೋಜನೆ ಕಾಯ್ದೆ ಘೋಷಣೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಪ್ರಸ್ತುತ 2024-26ನೇ ಸಾಲಿನ ಬಜೆಟ್’ನಲ್ಲಿ ಕೇಂದ್ರ ಸರ್ಕಾರ ಶೋಷಿತ ಸಮುದಾಯಗಳನ್ನು ನಿರ್ಲಕ್ಷಿಸಿದೆ,ಶೋಷಿತರ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎಂಬುದನ್ನು ಅರಿಯ ಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ದೇಶದ ಬಹುಜನರನ್ನು ನಯವಾಗಿ ವಂಚಿಸುವ ಹುನ್ನಾರದ ಬಜೆಟ್ ಮಂಡನೆ ಮಾಡಿದ್ದಾರೆ, ಸಂವಿಧಾನದ ಅನುಚ್ಛೇಧ (38)(39)ಗಳನ್ನು ನಿರ್ಲಕ್ಷಿಸುವ ಮೂಲಕ ವಿದ್ಯೆ, ಅಧಿಕಾರ ಸಂಪತ್ತು, ಭೂಮಿ, ಉದ್ಯೋಗ, ಕೈಗಾರಿಕೆಯನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಕೇವಲ ಬಂಡವಾಳ ಶಾಹಿ ಜನರನ್ನ ಕೇಂದ್ರೀಕರಣಗೊಳಿಸುವಸಂವಿಧಾನ ವಿರೋಧಿಯಾದ ಬಜೆಟ್ ಮಂಡಿಸಿರುವುದನ್ನು ವಿರೋಧಿಸುವುದಾಗಿ ಹೇಳಿದರು
ಕೇಂದ್ರ ಯೋಜನಾ ಆಯೋಗದ 1984ರ ನಿರ್ದೇಶನದಂತೆ ರಾಷ್ಟ್ರೀಯ ಎಸ್ ಸಿ ಎಸ್ ಟಿ ಉಪ- ಯೋಜನಾ ಕಾಯ್ದೆ ರೂಪಿಸಿ ಬಜೆಟ್’ ನಲ್ಲಿ ಪರಿಶಿಷ್ಟ ಜಾತಿ,ಪಂಗಡಗಳ ಜಾತಿಗಳ ಜನಸಂಖ್ಯೆಗನುಗುಣವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಅನುದಾನ ಮೀಸಲಿಡುವ ಕಾಯ್ದೆಯನ್ನು ಪ್ರಸ್ತುತ ಮುಂದುವರಿದ ಬಜೆಟ್ ನಲ್ಲಿ ಘೋಷಿಸಬೇಕು, ದೇಶದ ಜನತೆಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಘೋಷಣೆ ಮಾಡಬೇಕು,ಸಂವಿಧಾನದ ಅನುಚ್ಚೇಧ (38) (39ಎ)ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಯಲ್ಲಿ ದೇಶದ ಬೇರೆ-ಬೇರೆ ಭಾಷಿಕರ, ಪ್ರಾಂತ್ಯಗಳ ಹಾಗೂ ಜಾತಿ,ಲಿಂಗ, ವರ್ಗದ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳ ಸಮೀಕ್ಷೆ ಮತ್ತು ಅಧ್ಯಯನಕ್ಕೆ ಪೂರಕವಾಗಿ ರಾಷ್ಟ್ರೀಯ ಜಾತಿ ಜನಗಣತಿ ನಡೆಸಲು ಅನುದಾನ ಮೀಸಲಿರಿಸಬೇಕು ರೈತರ ಕೃಷಿ ಉತ್ಪನ್ನಗಳಿಗೆ ಡಾ||ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಭಗವಾನ್ ಬುದ್ಧರ ವಿಚಾರ ಕ್ರಾಂತಿ ಮತ್ತು ಭೌದ್ಧ ಸ್ಮಾರಕ ಸಂರಕ್ಷಣೆಗಾಗಿ ರಾಷ್ಟ್ರೀಯ ಭೌದ್ಧ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲಾ ಕೇಂದ್ರಸ್ಥಾನದಲ್ಲಿ ಸೂಪರ್ ಸ್ಪೆಸಾಲಿಟಿ ಆಸ್ಪತ್ರೆ ನಿರ್ಮಿಸಬೇಕು, ಜಿಲ್ಲೆಯ ಹೋಬಳಿ ಕೇಂದ್ರದಲ್ಲಿ ರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರ ಗಳನ್ನಾಗಿ ಮೇಲ್ದರ್ಜೆಗೇರಿಸಿ, ಜನರ ಆರೋಗ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು, ಬರಗಾಲ ನಿರ್ವಹಣೆಗೆ ಕೆರೆಗಳ ಹೂಳೆತ್ತಿಸಿ ನೀರು ತುಂಬಿಸಿ ಕೆರೆ ಸುತ್ತಲೂ ಆರಣ್ಯ ಗಿಡಗಳನ್ನು ನಾಟಿ ಮಾಡಿಸಿ ಸಂರಕ್ಷಿಸಲು ಅನುದಾನ ಘೋಷಿಸಬೇಕು, ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಲು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಣೆ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಯುಗಾದಿಯ ಸಂಚಾಲಕ ಕೆ.ಎಂ.ಅನಿಲ್ ಕುಮಾರ್, ಬಿ.ಆನಂದ್,ಈಚಕೆರೆ ನಾಗರಾಜ್,ವೈ.ಸುರೇಶ್ ಕುಮಾರ್ ಶೆಟ್ಟಹಳ್ಳಿರಾಮಕೃಷ್ಣ,ಭಾಗ್ಯಮ್ಮ,ಗೀತಾ, ಸುಕನ್ಯ ಸಂಪಹಳ್ಳಿ,ಹರಿಕುಮಾರ್ ಹೊಳಲು,ಹೊನ್ನಯ್ಯ ಟಿ.ಮಲ್ಲೀಗೆರೆ,ಸಿದ್ದಯ್ಯ ವೆಂಕಟೇಶ್ ಕರಿಜೆರಹಳ್ಳಿ, ಮಹದೇವ ಕೊತ್ತತ್ತಿ,ಸುರೇಶ್ ಮರಳಗಾಲ,ಬಸವರಾಜ್ ಲಿಂಗಾಪುರ ನೇತೃತ್ವ ವಹಿಸಿದ್ದರು.