ಮಂಡ್ಯ :- ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ರಿಸರ್ವ್ ಬ್ಯಾಂಕ್ ನಿಯಮಾವಳಿಯಂತೆ ನಿರ್ಬಂಧ ವಿಧಿಸಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರದ ಜೊತೆಗೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಕಾರ್ಯಕರ್ತೆಯರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತೆಯರು
ಮೈಕ್ರೋ ಫೈನಾನ್ಸ್ ಗಳ ಸಾಲದ ಸುಳಿಗೆ ಸಿಲುಕಿ ರಾಜ್ಯದಲ್ಲಿ ಮಹಿಳೆಯರು ಮತ್ತು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಬಡ್ಡಿ ಸುಲಿಗೆ, ಅಶ್ಲೀಲ ಪದ ಬಳಕೆ,ಹಣ ವಸೂಲಾತಿಗಾಗಿ ರೌಡಿಗಳ ಬಲ ಪ್ರಯೋಗದಂತಹ ಕ್ರೌರ್ಯಗಳು ಹೆಚ್ಚಾಗಿದ್ದು, ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಪ್ಪಿಸಲು ರಾಜ್ಯ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ. ಕಿರುಕುಳ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿ ಎಲ್ಲಾ ಜಿಲೆ ಕೇಂದ್ರಗಳಲ್ಲೂ ಸಹಾಯವಾಣಿ ಗಳನ್ನು ತೆರೆಯುವಂತೆ ಸೂಚಿಸಲಾಗಿದೆ,ಜನಸಾಮಾನ್ಯರನ್ನು ವಂಚಿಸುತ್ತಿರುವುದು ಬರಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಾತ್ರವಲ್ಲದೆ ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳು ಅನಿಯಂತ್ರಿತ ಠೇವಣಿಗಳ ಯೋಜನೆಯಡಿ ಅಧಿಕ ಬಡ್ಡಿಯ ಅಸ ತೋರಿಸಿ ಜನರಿಂದ ಹಣ ದೋಚಿ ವಂಚಿಸಿರುವ ಘಟನೆಗಳು ಕೂಡಾ ಬೆಳಕಿಗೆ ಬಂದಿವೆ. ಈ ಪ್ರಕರಣಗಳ ವಿರುದ್ಧವು ಕೂಡಾ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಮೋಸ ಹೋದ ಜನರಿಗೆ ಯಾವುದೆ ಪರಿಹಾರ ದೊರೆತಿಲ್ಲ. ಇದರ ಜೊತೆಗೆ ಮೈಕ್ರೋ ಫೈನಾನ್ಸ್ ಹಾವಳಿಗಳ ಜೊತೆಗೆ ಮೀಟರ್ ಬಡ್ಡಿ ದಂದೆಗಳು ಜನಸಾಮಾನ್ಯರನ್ನು ರಕ್ತ ಹೀರುವ ಜಿಗಣೆಗಳಂತೆ ಬಾಧಿಸುತ್ತಿವೆ.,ಸಾಲದ ಸುಳಿಯಿಂದ ಪಾರಮಾಡಲು ಸುಗ್ರಿವಾಜ್ಞೆ ಹೊರಡಿಸಿದರೆ ಮಾತ್ರ ಪ್ರಯೋಜನವಿಲ್ಲ ಅಷ್ಟೇ ಅಲ್ಲದೆ ಜನರನ್ನು ಆರ್ಥಿಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಮತ್ತು ಔದ್ಯೋಗಿಕವಾಗಿ ಸಬಲರನ್ನಾಗಿ ಮಾಡದೆ ನೂರಾರು ಕಾನೂನು ಜಾರಿಮಾಡಿದರು ಪ್ರಯೋಜನವಿಲ್ಲ. ಇದನ್ನು ಅರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ ಸೇರಿದಂತೆ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆ ಸಂಘ ಸಂಸ್ಥೆಗಳ ಹಣಕಾಸಿನ ವ್ಯವಹಾರ ವಹಿವಾಟಿನ ಮೇಲೆ ನಿರ್ಭಂದ ಮತ್ತು ನಿರ್ಣಾಯಕ ತೀರ್ಮಾನ ಮಾಡುವ ಹಕ್ಕು ರಿಸರ್ವ್ ಬ್ಯಾಂಕ್ ಇರುವುದರಿಂದ ಕೇಂದ್ರ ಸರ್ಕಾರದ ಜೊತೆ ಸಚಿವ ಎಚ್ ಡಿ ಕುಮಾರಸ್ವಾಮಿ ಮಾತುಕತೆ ನಡೆಸಿ ಕಡಿವಾಣ ಹಾಕಿಸಲು ಮುಂದಾಗಬೇಕು, ಆತ್ಮಹತ್ಯೆಗೆ ಒಳಗಾಗಿರುವ ಕುಟುಂಬ ಗಳಿಗೆ ಪರಿಹಾರ ಕೊಡಿಸಿ ಸಾಲ ಮನ್ನಾ ಮಾಡಿಸಬೇಕು,ಅನಿಯಂತ್ರಿತ ಠೇವಣಿ ಯೋಜನೆಗಳ ಅಡಿಯಲ್ಲಿ ಅಧಿಕ ಬಡ್ಡಿ ಅಸೆ ತೋರಿಸಿ ಮಹಿಳೆಯರು ಮತ್ತು ಜನಸಾಮಾನ್ಯರಲ್ಲಿ ಕಂತಿನ ಮೂಲಕ ಹಣ ಕಟ್ಟಿಸಿಕೊಂಡು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು,ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿ ಅಧಿಕಾರಿಯನ್ನು ನೇಮಕ ಮಾಡಿ ಮೋಸ ಹೋದ ವರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಸ್ತ್ರೀ ಶಕ್ತಿ ಯೋಜನೆ ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆ ಬಗ್ಗೆ ಅರಿವು ಮೂಡಿಸ ಬೇಕು, ಖಾಸಗಿ ಸಂಘ ಸಂಸ್ಥೆಗಳಿಗೆ ಬ್ಯಾಂಕುಗಳ ಮೂಲಕ ಸಾಲ ಒದಗಿಸುವುದನ್ನು ಬಿಟ್ಟು ನೇರವಾಗಿ ರೈತರು,ಮಹಿಳೆಯರು ಹಾಗೂ ಹಿಂದುಳಿದ ಜನ ಸಾಮಾನ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು. ಅತಿ ಹೆಚ್ಚು ತೆರಿಗೆ ವಿಧಿಸುವ ಪ್ರಕ್ರಿಯೆ ನಿಲ್ಲಬೇಕು.ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು,ಯುವಜನತೆಗೆ ಉದ್ಯೋಗವಕಾಶಗಳು ಹೆಚ್ಚಾಗಬೇಕು ಗೃಹ ಲಕ್ತಿ ಯೋಜನೆ ಸಮರ್ಪಕವಾಗಿ ಜಾರಿಯಾಗದೆ ಮಹಿಳೆಯರಿಗೆತೊಂದರೆಯಾಗುತ್ತಿದ್ದು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಪ್ರತಿ ತಿಂಗಳು ಹಣ ಸಂದಾಯ ಮಾಡಬೇಕು,ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಜನತೆಯ ಪರವಾಗಿ ಕೆಲಸ ಮಾಡಬೇಕು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಕೊಟ್ಟ ಮಾತಿನಂತೆ ಆಡಳಿತ ನಡೆಸಬೇಕು ಎಂದು ಆಗ್ರಹ ಮಾಡಿದರು.
ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಸಿದ್ದರಾಜು, ಮಹಿಳಾ ಮುನ್ನಡೆ ಕಮಲ, ಶಿಲ್ಪ ಬಿ ಎಸ್, ಲತಾ ಶಂಕರ್, ಪ್ರಿಯ ರಮೇಶ್, ಗಿರಿಜಾ,ಸುಮಾ ನೇತೃತ್ವ ವಹಿಸಿದ್ದರು.