ಮಂಡ್ಯ :- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಡ್ಯ ಜಿಲ್ಲೆಯಲ್ಲಿ ಭತ್ತ ನಾಟಿ ಮಾಡಿ ರಾಜ್ಯ ಸರ್ಕಾರಕ್ಕೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸದ್ಬುದ್ಧಿಯನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.
ಕೊತ್ತತ್ತಿ ಗ್ರಾಮದಲ್ಲಿನ ರೈತರಾದ ಸುಖೇಂದ್ರ ಮತ್ತು ಶಿವಬಸಪ್ಪ ಅವರ ಜಮೀನಿನಲ್ಲಿ ವಿಜಯೇಂದ್ರ ಪಂಚೆ ಎತ್ತಿ ಕಟ್ಟಿ ಭತ್ತ ನಾಟಿ ಮಾಡಿದರು.
ನಂತರ ಅವರು ಮಾತನಾಡಿ, ರಾಜ್ಯದ ಮುಂದಿನ ಬಜೆಟ್ ರೈತಪರ ಬಜೆಟ್ ಆಗಿರಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ರೈತಪರ ನಿರ್ಧಾರ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಬಾರಿ ರೈತರ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನೂ ಜಾರಿಗೊಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯರ ಸರ್ಕಾರ ನಿಲ್ಲಿಸಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರು ಹೊಲಕ್ಕೆ ಟ್ರಾನ್ ಫಾರ್ಮರ್ ಹಾಕಲು 25 ಸಾವಿರ ರೂ. ಕಟ್ಟಿದರೆ ಸಾಕಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇವತ್ತು 2ರಿಂದ 3 ಲಕ್ಷ ಖರ್ಚಾಗುತ್ತಿದೆ,ಒಂದು ಕಡೆ ಗ್ಯಾರಂಟಿ ಮೂಲಕ ಕೊಡುವುದಾಗಿ ಹೇಳುತ್ತಾರೆ. ಮತ್ತೊಂದು ಕಡೆ ಕಿತ್ತುಕೊಳ್ಳುವ ಕೆಲಸ ನಡೆಸುತ್ತಿದ್ದಾರೆ. ಇದು ಬಡವರ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
ಇದು ರೈತವಿರೋಧಿ ಸರಕಾರ. ಅಧಿವೇಶನದಲ್ಲಿ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ಕಿವಿ ಹಿಂಡುವ ಕೆಲಸ ಮಾಡಲಿದೆ. ಕಾಂಗ್ರೆಸ್ ಸರ್ಕಾರದ ನಿಜ ಬಣ್ಣವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಲಿದ್ದೇವೆ,ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡುವ ರೀತಿಯಲ್ಲಿ, ತಮಿಳುನಾಡಿನ ಸ್ಟಾಲಿನ್‍ಗೆ, ಯುಪಿಎ ಮಿತ್ರಕೂಟಕ್ಕೆ ಖುಷಿಪಡಿಸಲು ಯಥೇಚ್ಛವಾಗಿ ನೀರು ಬಿಡುವ ಕೆಲಸವನ್ನು ಇದೇ ಕಾಂಗ್ರೆಸ್ ಮಾಡಿತ್ತು ಎಂದು ಕಿಡಿ ಕಾರಿದರು. ರಾಜ್ಯವು ಈಗಾಗಲೇ ಪ್ರಖರ ಬಿಸಿಲನ್ನು ನೋಡುತ್ತಿದೆ. ಉಷ್ಣಾಂಶದ ತೀವ್ರ ಹೆಚ್ಚಳವನ್ನೂ ನಿರೀಕ್ಷಿಸಲಾಗಿದೆ. ಜಾನುವಾರುಗಳಿಗೆ ಮೇವನ್ನು ಕ್ರೋಡೀಕರಿಸಿ ಇಡಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಕಡೆ ಗಮನಿಸಬೇಕು,ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರಿಗೆ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ 4 ಸಾವಿರ ರೂ. ಹೆಚ್ಚುವರಿಯಾಗಿ ರೈತರಿಗೆ ನೀಡಿದರು. ಕಾಂಗ್ರೆಸ್ ಬಂದ ಬಳಿಕ ಅದನ್ನು ನಿಲ್ಲಿಸಿದ್ದಾರೆ. ಹಿಂದೆ ಬಿಜೆಪಿ ಸರಕಾರವು ರೈತ ವಿದ್ಯಾನಿಧಿ ಕೊಟ್ಟಿದ್ದು, ಅದನ್ನೂ ನಿಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು.
ಮಂಡ್ಯ ಜಿಲ್ಲೆಯ ಜಲ, ಸಿರಿ ಮತ್ತು ಧಾನ್ಯಸಂಪತ್ತು ಬಗ್ಗೆ ಮೈಸೂರು ಮಹಾರಾಜರ ಕನಸು ಕಂಡಿದ್ದರು. ಮಂಡ್ಯ ಜಿಲ್ಲೆ ಯಾವತ್ತೂ ಹಚ್ಚ ಹಸುರಾಗಿರಬೇಕು. ಈ ಭಾಗದ ರೈತರಿಂದ ಮೈಸೂರು ಸೀಮೆಯ ಎಲ್ಲ ಜನರಿಗೆ ಎರಡು ತುತ್ತು ಅನ್ನ ಕೊಡುವ ಕೆಲಸ ಆಗಬೇಕು ಎಂದು ಕನಸು ಕಂಡಿದ್ದರು. ಮಂಡ್ಯ ಜಿಲ್ಲೆ ಎಂದರೆ ಒಬ್ಬ ರೈತ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ನಾಡು. ಬೂಕನಕೆರೆಯ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯಭೂಮಿ, ಯಡಿಯೂರಪ್ಪ ಅವರಿಗೆ ರೈತಪರ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ಮಣ್ಣು ಪ್ರೇರಣೆ ಕೊಟ್ಟಿದೆ. ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಂಡು, ರೈತರಿಗೆ ಒಂದು ಪ್ರತ್ಯೇಕ ಬಜೆಟ್ ಮಂಡಿಸಿದ್ದರು. ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕೊಟ್ಟಂಥ ಏಕೈಕ ಮುಖ್ಯಮಂತ್ರಿ, ಧೀಮಂತ ನಾಯಕ ಎಂದು ಬಣ್ಣಿಸಿದರು.