ಮಂಡ್ಯ :- ವಿಶ್ವವಿಖ್ಯಾತ ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ಏ.7 ರಂದು ವೈರಮುಡಿ ಬ್ರಹ್ಮೋತ್ಸವ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಗಳು ಈಗಾಗಲೇ ಆರಂಭಗೊಂಡಿದ್ದು. ಏ.14 ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೈರಮುಡಿ ಬ್ರಹ್ಮೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಕೆಆಎಸ್‌ಆರ್‌ಟಿಸಿ ವತಿಯಿಂದ ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ಪಟ್ಟಣ ಹಾಗೂ ನಗರ ಭಾಗಗಳಿಂದ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ಕಡೆಯಿಂದ 10, ಮೈಸೂರು ಕಡೆಯಿಂದ 40, ಮದ್ದೂರು ಭಾಗದಿಂದ 5, ನಾಗಮಂಗಲ ಮಾರ್ಗದಿಂದ 5, ಕೆ.ಆರ್.ಪೇಟೆಯಿಂದ 10, ಶ್ರೀರಂಗಪಟ್ಟಣದಿAದ 15 ಹಾಗೂ ಮಂಡ್ಯ ನಗರದಿಂದ 50 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಇವು ನಿರಂತರವಾಗಿ ಸಂಚರಿಸಲಿವೆ. ಕ್ಷೇತ್ರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಗ್ರಾಮದ ಹೊರ ಭಾಗದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಹಿರಿಯ ನಾಗರೀಕರು ಹಾಗೂ ಗರ್ಭೀಣಿಯರಿಗೆ ಪಾರ್ಕಿಂಗ್ ಸ್ಥಳದಿಂದ ದೇವಾಲಯದವರೆಗೆ ಓಡಾಡಲು 10 ಉಚಿತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಮೊದಲು ಮೇಲುಕೋಟೆ ಉತ್ಸವದ ಸಂದರ್ಭದಲ್ಲಿ ಬಾಡಿಗೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ ಮೇಲುಕೋಟೆ ಸುತ್ತ ಮುತ್ತ ಶಾಶ್ವತವಾಗಿ 19 ಲಕ್ಷ ರೂ. ವೆಚ್ಚದಲ್ಲಿ 40 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು. ದೇವಾಲಯದ ವತಿಯಿಂದ ಇದೇ ಪ್ರಥಮ ಬಾರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ದೇವಾಲಯಕ್ಕೆ ಸೇರಿದ ದಾಸೋಹ ಭವನದಲ್ಲಿ ವೈರಮುಡಿ ರಥೋತ್ಸವ ನಡೆಯುವ ಏ.7 ಬೆಳಿಗ್ಗೆ 8 ರಿಂದ ಏ.8 ರ ಬೆಳಿಗ್ಗೆ 8 ಗಂಟೆಯವರೆಗೆ ನಿರಂತರವಾಗಿ ಭಕ್ತಾಧಿಗಳಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಧಾರ್ಮಿಕ ಕ್ಷೇತ್ರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೇಲುಕೋಟೆ ವೈರಮುಡಿ ಉತ್ಸವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. 5 ಡಿವೈಎಸ್ಪಿ, 34 ಸಿಪಿಐ, 79 ಪಿಎಸ್‌ಐ, 128 ಎ.ಎಸ್.ಐ, 664 ಹೆಡ್ ಕಾನ್ಸಟೇಬಲ್ ಹಾಗೂ ಪೊಲೀಸ್ ಕಾನ್ಸಟೇಬಲ್‌ಗಳನ್ನು 86 ಮಹಿಳಾ ಪೊಲೀಸ್ ಸಿಬ್ಬಂದಿ, 100 ಗೃಹರಕ್ಷಕ ದಳ ಸಿಬ್ಬಂದಿ ಸೇರಿ ಒಟ್ಟು 1096 ಸಿಬ್ಬಂದಿಗಳನ್ನು ಬಿಗಿ ಬಂದೋಬಸ್ತ್ಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು .
ಜಿಲ್ಲಾ ಖಜಾನೆಯಿಂದ ವೈರಮುಡಿ ಪೆಟ್ಟಿಗೆ ದೇವಾಲಯಕ್ಕೆ ರವಾನೆ: ಏ.7 ರಂದು ಬೆಳಿಗ್ಗೆ 7 ಗಂಟೆಗೆ ಮುಡಿ ಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆಯಿಂದ ಶ್ರೀ ಲಕ್ಶ್ಮೀ ಜನಾರ್ಧನ ಜನಾರ್ಧನಸ್ವಾಮಿ ದೇವಾಲಯದ, ಇಂಡುವಾಳು, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ, ಬನ್ನಿಮಂಟಪ, ಕಿರಂಗೂರು, ದಸರಗುಪ್ಪೆ, ಪಾಂಡವಪುರ, ಹರಳಹಳ್ಳಿ, ಬನಘಟ್ಟ, ಕೆ.ಹೊಸೂರು ಗೇಟ್, ಟಿ.ಎಸ್.ಛತ್ರ, ಬೆಳ್ಳಾಳೆ, ಅಮ್ಮತಿ, ನ್ಯಾಮನಹಳ್ಳಿ, ಜಕ್ಕನಹಳ್ಳಿ, ಕದಲಗೆರೆ ಮಾರ್ಗವಾಗಿ ಪೊಲೀಸ್ ಬಂದೋಬಸ್ತ್ನಲ್ಲಿ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುವುದು. ಎಲ್ಲಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ರಾತ್ರಿ 8 ಗಂಟೆಗೆ ವೈರಮುಡಿ ಬ್ರಹ್ಮೋತ್ಸವ ಪ್ರಾರಂಭವಾಗುವುದು ಎಂದರು.
ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಹೋಗುವ ಹಾಗೂ ದೇವಾಲಯದಲ್ಲಿ ಬ್ರಹ್ಮೋತ್ಸವ ಪ್ರಾರಂಭವಾಗಿ ಮುಕ್ತಾಯವಾಗುವವರೆಗೂ ಭಕ್ತಾಧಿಗಳ ವೀಕ್ಷಣೆಗೆ ಅನುಕೂಲವಾಗುವಂತೆ ದೃಶ್ಯ ಮಾಧ್ಯಮ ಹಾಗೂ ಯು ಟ್ಯೂಬ್ ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜನರು ಸೇರುವ ಸ್ಥಳಗಳಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ ಎಂದರು.
ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಮೇಲುಕೋಟೆಯ ದೊಡ್ಡ ಕಲ್ಯಾಣಿಯಲ್ಲಿ ಏ.11 ರಂದು ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ. ಕಲ್ಯಾಣಿಗೆ ವಿಶೇಷ ವಿದ್ಯುತ್, ದೀಪಾಲಂಕಾರ ಮಾಡಿಸಲಾಗಿದ್ದು, ಕಲ್ಯಾಣಿಯ ವಿವಿಧ ವೇದಿಕೆಗಳಲ್ಲಿ ಮ್ಯಾಂಡಲಿನ್ ವಾದನ, ಓಕಲ್, ಭರತ ನಾಟ್ಯ, ಚಂಡೆ ಮದ್ದಳೆ ಮತ್ತು ನಾದಸ್ವರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಳೆದ ಬಾರಿಯಂತೆ ಈ ವರ್ಷವೂ ಸಹ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮತ್ತು ಹೂವಿನ ಅಲಂಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಸಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹಾಗೂ ಹರ್ಷ ಪಣ್ಣೆದೊಡ್ಡಿ ಉಪಸ್ಥಿತರಿದ್ದರು