12.1 C
New York
Tuesday, April 22, 2025

Buy now

spot_img

ಆಮೇರಿಕ ಉಪಾಧ್ಯಕ್ಷರ ಭಾರತ ಭೇಟಿಗೆ ವಿರೋಧ

ಮಳವಳ್ಳಿ :- ಆಮೇರಿಕ ಉಪಾಧ್ಯಕ್ಷ ಜೆಡಿ ವಾನ್ಸ್ ಭಾರತ ಭೇಟಿ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಕರ್ತರು ಮಳವಳ್ಳಿಯಲ್ಲಿ  ಪ್ರತಿಭಟನೆ ನಡೆಸಿದರು
ಪಟ್ಟಣದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಭಾರತವು ಮಾರಾಟಕ್ಕಿಲ್ಲ ಎಂಬ ಸಂದೇಶ ರವಾನಿಸಿ ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿಯನ್ನು ಪ್ರಬಲವಾಗಿ ವಿರೋಧಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್ ಎಲ್ ಭರತ್ ರಾಜ್ ಮಾತನಾಡಿ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ಮೂಲಕ ಭಾರತದ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆ ಯನ್ನು ಆಮೇರಿಕಾ ದೇಶದ ಉತ್ಪನ್ನಗಳಿಗೆ ಸುಂಕ ರಹಿತವಾಗಿ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಆಮೇರಿಕಾ ಉಪಾಧ್ಯಕ್ಷ ಭೇಟಿ ಮತ್ತು ವಾಣಿಜ್ಯ ಮಾತುಕತೆ ಭಾರತದ ಕೋಟ್ಯಾಂತರ ರೈತಾಪಿ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಹಾಗಾಗಿ ಇವರ ಬೇಟಿಯನ್ನು ವಿರೋಧ ಮಾಡುತ್ತಿದ್ದೇವೆ ಎಂದರು
ದೇಶದಲ್ಲೇ ಎರಡನೆ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯ ವಾಗಿರುವ ಕರ್ನಾಟಕದ ಸುಮಾರು ಹತ್ತಕ್ಕೂ ಹೆಚ್ಚು ಜಿಲ್ಲೆಗಳ ರೈತ ಕುಟುಂಬಗಳು ತಮ್ಮ ಜೀವನಾಧಾರಕ್ಕಾಗಿ ಹೈನುಗಾರಿಕೆ ಯನ್ನು ಅವಲಂಬಿಸಿವೆ, ತೊಗರಿ  ಸೋಯಾಬೀನ್ ,ಬಟಾಣಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಮೆಕ್ಕೆಜೋಳ, ಎಥೆನಾಲ್  ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾಗಿವೆ. ಅದೇ ರೀತಿ ಕರಾವಳಿ ಕರ್ನಾಟಕದ ಪ್ರಮುಖ ಜೀವನೋಪಾಯ ಮೀನುಗಾರಿಕೆ ಕೃಷಿಯನ್ನು ಅವಲಂಬಿಸಿದೆ. ಈ ಎಲ್ಲಾ ಕೃಷಿ ಉತ್ಪನ್ನಗಳು ಈಗಾಗಲೇ ಬೆಂಬಲ ಬೆಲೆ ಅಭಾವ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಕಷ್ಟ ಹಾಗೂ ನಷ್ಟವನ್ನು ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಈ ವಲಯಗಳು ಸೇರಿದಂತೆ ವಿವಿಧ ರೀತಿಯ ತೋಟಾಗಾರಿಕೆ ಉತ್ಪನ್ನಗಳ ಸುಂಕ ರಹಿತ ಅಮದು ರೈತರನ್ನು ಸಂಪೂರ್ಣವಾಗಿ ದಿವಾಳಿಯೆಬ್ಬಿಸಿ ರಾಜ್ಯದ ರೈತರನ್ನು ನಿರುದ್ಯೋಗ-ಸಾಲಭಾಧೆಗೆ ಸಿಲುಕಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶೇಷವಾಗಿ ರಾಜ್ಯದ ಹೈನುಗಾರಿಕೆ  ಮತ್ತು ಕರ್ನಾಟಕ ಹಾಲು ಒಕ್ಕೂಟ (KMF) ಕ್ಕೆ  ಅಮದು ಸುಂಕ ನಿರ್ಧಾರ ಶವಪಟ್ಟಿಗೆಗೆ ಹೊಡೆಯುವ ಕೊನೆ ಮೊಳೆ ಆಗಲಿದೆ ಹಾಗಾಗಿ ಯಾವುದೇ ಒತ್ತಡಕ್ಕೂ ಮಣಿಯದೇ ಹೈನುಗಾರಿಕೆ, ಮೀನುಗಾರಿಕೆ ,ತೋಟಗಾರಿಕೆ ಸೇರಿದಂತೆ  ಕೃಷಿಯನ್ನು ವಾಣಿಜ್ಯ ಮಾತುಕತೆಗಳಿಂದ ಹೊರಗಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಆಗ್ರಹಿಸಿದರು.
ಆಮೇರಿಕಾದಲ್ಲಿ ಶೇ70 ರಷ್ಟು ಮಾರುಕಟ್ಟೆ ಹೊಂದಿದ್ದ ಚೀನಾ, ಕೆನಡಾ , ಮೆಕ್ಸಿಕೋ ಇತರೆ  ದೇಶಗಳು ಆಮೇರಿಕಾದ ಸುಂಕ ಸಮರದ ಬೆದರಿಕೆಗೆ ಯಾವುದೇ ರೀತಿಯಲ್ಲಿ ಮಣಿಯದೇ ತಿರುಗೇಟು ನೀಡಿದೆ. ಆದರೆ ಆಮೇರಿಕಾದ ಜೊತೆ ವ್ಯಾಪಾರದ ಕೊರತೆ ಇರುವ ಭಾರತ  ದಿಟ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸ್ವತಃ ನರೇಂದ್ರ ಮೋದಿ ಸಮ್ಮುಖದಲ್ಲೇ ಭಾರತವನ್ನು ಸುಂಕ ರಾಜ ಎಂದು ಡೋನಾಲ್ಡ್ ಟ್ರಂಪ್   ಅಣಕಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದಾಗಲೂ ,ಭಾರತದ ವಲಸೆ ಕಾರ್ಮಿಕರನ್ನು ಕೋಳ ತೊಡಿಸಿ ಅಮಾನವೀಯವಾಗಿ ನಡೆಸಿಕೊಂಡಾಗಲೂ ಸೂಕ್ತ ಪ್ರತಿಭಟನೆ ವ್ಯಕ್ತಪಡಿಸಿಲ್ಲ . ಕೆಲವೇ ಕೆಲವು ದೊಡ್ಡ ಉದ್ಯಮಿಗಳ  ರಪ್ತು ವ್ಯವಹಾರಕ್ಕಾಗಿ , ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ  ಕೋಟ್ಯಾಂತರ ರೈತರ ಜೀವನೋಪಾಯ ಸರ್ವ ನಾಶ ಮಾಡುವ ಮಾತುಕತೆಗಳು ಆಹಾರ ಭದ್ರತೆ, ಆಹಾರ ಸ್ವಾವಲಂಬನೆ ಅಂತಿಮವಾಗಿ ದೇಶದ ಸಾರ್ವಭೌಮತ್ವ ವನ್ನು ಅಪಾಯಕಾರಿ ಪರಿಸ್ಥಿತಿಗೆ ಕೊಂಡೊಯ್ಯಲಿದೆ. ವಾನ್ಸ್ ಭೇಟಿ ಹಿನ್ನಲೆಯಲ್ಲಿ ಆಮೇರಿಕಾ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್  ಕೃಷಿ ಮಾರುಕಟ್ಟೆ ಮುಕ್ತಗೊಳಿಸುವುದೇ  ಭಾರತದ ಮಾತುಕತೆಯಲ್ಲಿ ಪ್ರಮುಖ ಅಧ್ಯತಾ ವಿಷಯ ವಾಗಿದ್ದು ಯಾವುದೇ ಸುಂಕ ಹಾಗೂ ಇತರೆ ತಡೆಗಳನ್ನು ನಿವಾರಿಸಬೇಕು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದ್ದರಿಂದ ಆಮೇರಿಕಾ ಉಪಾಧ್ಯಕ್ಷ ರ ಜೊತೆ ವಾಣಿಜ್ಯ ಮಾತುಕತೆಗಳನ್ನು ರದ್ದುಪಡಿಸಬೇಕು. ಆಮೇರಿಕಾದ ಸುಂಕ ಸಮರದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು  ಸಂಸತ್ ಹಾಗೂ ಶಾಸನಸಭೆಗಳಲ್ಲಿ ಚರ್ಚಿಸಿ ಸೂಕ್ತ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ಗುರುಸ್ವಾಮಿ ಎಂ.ಇ ಮಹಾದೇವು, ಹಿಪ್ಜೂಲ್ಲಾ, ಶಿವಕುಮಾರ್ ಚಿಕ್ಕಸ್ವಾಮಿ ಚಿಕ್ಕಮೊಗಣ್ಣ ಸಿದ್ದರಾಜ್,ನಾಗಮ್ಮ ಜಮೂನ,  ನಂಜುಂಡಸ್ವಾಮಿ, ಚನ್ನಬಸಪ್ಪ, ಶಿವು, ಕರಿಯಪ್ಪ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles