ಮಂಡ್ಯ :- ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದೆ ಬ್ರಾಹ್ಮಣ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಬ್ರಾಹ್ಮಣ ಸಭಾ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಭಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಬ್ರಾಹ್ಮಣ ಸಮಾಜದ ಮೆಲೆ ಕೆಲವು ಸಮಾಜ ವಿದ್ರೋಹಿ ಮನಸ್ಥಿತಿಯ ಅವಿವೇಕಿಗಳು ಆಗಾಗ್ಗೆ ಉಪದ್ರವಗಳನ್ನು ಉಂಟು ಮಾಡುತ್ತಿದ್ದಾರೆ. ಇದು ಇತ್ತೀಚೆಗೆ ಅತಿರೇಕಕ್ಕೆ ಹೋಗುತ್ತಿದೆ,ಶಿವಮೊಗ್ಗ, ಬೀದರ್, ಸಾಗರ ದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಸಿ.ಇ.ಟಿ. ಪರೀಕ್ಷೆಗೆ ಹಾಜರಾಗಲು ಹೋದಾಗ ಕೆಲವು ಅವಿವೇಕಿ ಅಧಿಕಾರಿಗಳು ಜನಿವಾರ ತೆಗೆದುಹಾಕಿ ಬಂದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕೊಡುತ್ತೇವೆ ಎಂದು ಪರೀಕ್ಷೆಯಿಂದ ವಂಚಿತ ಮಾಡಿದ್ದಾರೆ. ಉನ್ನತ ವ್ಯಾಸಂಗಕ್ಕೆ ತೆರಳುವ ಮುನ್ನಾ ಮಕ್ಕಳ ಭವಿಷ್ಯದ ಬಗ್ಗೆ ಆಟವಾಡಿ ವಿದ್ಯಾರ್ಥಿಗಳ ಆತ್ಮಸ್ಥೆರ್ಯ ಕುಗ್ಗಿಸಿರುತ್ತಾರೆ,ಸಂವಿಧಾನದಲ್ಲಿ ಅವರವರ ಆಚರಣೆಗೆ ಮಾನ್ಯತೆ ಕೊಡಲಾಗಿದೆ. ದಾರದ ಎಳೆಗಳಿರುವ ಜನಿವಾರ, ಶಿವದಾರ, ಕಾಶಿದಾರದಲ್ಲಿ ಪರೀಕ್ಷೆ ನಕಲು ಮಾಡಲು ಯಾವ ರೀತಿಯ ಡಿವೈಸ್‌ಗಳನ್ನು ಇಡಲು ಸಾಧ್ಯವಿದೆ ಎಂಬುದನ್ನು ಅರಿಯಬೇಕಾಗಿದೆ ಎಂದರು. ಸಾಮಾನ್ಯ ಜ್ಞಾನ ಪರೀಕ್ಷಾ ನಿಯಮಗಳಲ್ಲಿ ಜನಿವಾರ ತೆಗೆದುಹಾಕಿ ಪರೀಕ್ಷೆ ಬರೆಯಬೇಕು ಎಂಬ ಯಾವುದೇ ನಿಯಮವಿಲ್ಲ, ಇದರ ಪರಿಜ್ಞಾನ ವಿಲ್ಲದ ಸರ್ಕಾರದ ಅಧಿಕಾರಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬಾರದು, ಬ್ರಾಹ್ಮಣ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆದುಕೊಂಡಿರುವುದು ಉದ್ದೇಶಪೂರ್ವಕವಾಗಿ ಕಾಣುತ್ತದೆ, ಜನಿವಾರವನ್ನು ಕೇವಲ ಬ್ರಾಹ್ಮಣರು ಧರಿಸುವುದಿಲ್ಲ,ಕ್ಷತ್ರಿಯ ಪಂಗಡಗಳಿಗೆ ಸೇರಿದ ವೈಶ್ಯ ಪಂಗಡ,ವಿಶ್ವಕರ್ಮ ಸಮಾಜ ಸೇರಿದಂತೆ ಹಲವು ಸಮುದಾಯದ ಜನತೆ ಧರಿಸುತ್ತಾರೆ, ಹಿಂದೂ ಮುತ್ತೈದೆಯರಿಗೆ ಮಾಂಗಲ್ಯ ಎಷ್ಟು ಮುಖ್ಯವೋ, ವಿಪ್ರರಿಗೆ ಜನಿವಾರವೂ ಅಷ್ಟೇ ಮುಖ್ಯವಾದುದು ಎಂಬುದನ್ನು ಸರ್ಕಾರ ಗಮನಿಸಿಲ್ಲ ಪರಿಸ್ಥಿತಿ ಹೀಗಿರುವಾಗ ಕೇವಲ ಬ್ರಾಹ್ಮಣ ವಿದ್ಯಾರ್ಥಿಗಳನ್ನಷ್ಟೇ ಗುರಿಯಾಗಿಸಿ ಜನಿವಾರವನ್ನು ಕತ್ತರಿಯಿಂದ ಕತ್ತರಿಸಿದ್ದು, ಜನಿವಾರವನ್ನು ತೆಗೆಯದಿದ್ದವರಿಗೆ ಪರೀಕ್ಷೆಗೆ ಅವಕಾಶ ನೀಡದೇ ಇರುವುದು ದುರುದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿದರು.
ಜನಿವಾರ ಧರಿಸಿದ ಮೇಲೆ ಜೀವನಪೂರ್ತಿ ಯಾವುದೇ ಕಾರಣಕ್ಕೂ ಜನಿವಾರವಿಲ್ಲದೇ ಇರಬಾರದು ಎಂಬುದು ವಿಪ್ರರು ನಂಬುವ ಶಾಸ್ತ್ರ, ಸರ್ಕಾರಕ್ಕೆ ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿ ಕಾಪಾಡುವುದು ಅಷ್ಟೇ ಮುಖ್ಯ, ಇಂತಹ ಮನಸ್ಥಿತಿಯ ವ್ಯಕ್ತಿಗಳ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಇಲ್ಲದಿದ್ದರೆ ಇವರು ನಡೆದಿದ್ದೇ ದಾರಿ ಎನ್ನುವ ಹಾಗೆ ನಡೆದುಕೊಳ್ಳುತ್ತಾ, ಹಿಂದೂ ಧರ್ಮದ ಸಂಪ್ರದಾಯಗಳ ಮೇಲೆ ಪ್ರಹಾರ ಮಾಡುವುದನ್ನು ಮುಂದುವರಿಸುವ ಸಂದರ್ಭ ಹೆಚ್ಚಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಗಮನಹರಿಸಿ ಜನಿವಾರ ತಗಸಿದ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ತೆಗೆದುಕೊಂಡು ಮತ್ತೆ ಇಂತಹ ಕೃತ್ಯಗಳು ನಡೆಯದಂತೆ ಕಠಿಣ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು. ಸಿ.ಇ.ಟಿ. ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಸೀಟ್ ನೀಡುವುದರ ಜೊತೆಗೆ ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿರುವ ಅಧಿಕಾರಿ ನೌಕರರ ಪರವಾಗಿ ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್ ನರಸಿಂಹಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ,ಎಸ್.ಶಂಕರ ನಾರಾಯಣ ಶಾಸ್ತ್ರಿ, ಅನಂತ್ ಕುಮಾರ್.ಸಿ ಪಿ ವಿದ್ಯಾ ಶಂಕರ್ ನೇತೃತ್ವ ವಹಿಸಿದ್ದರು.