14.6 C
New York
Friday, April 25, 2025

Buy now

spot_img

ಕಾವೇರಿ ಆರತಿಗೆ ವಾರದಲ್ಲಿ ನೀಲ ನಕ್ಷೆ : ಡಿ ಕೆ ಶಿವಕುಮಾರ್

ಮಂಡ್ಯ :- ಜೀವನದಿ ಕಾವೇರಿಗೆ ದಸರಾ ಆಚರಣೆ ಸಮಯದಲ್ಲಿ ಕಾವೇರಿ ಆರತಿ ಮಾಡುವ ಉದ್ದೇಶ ಹೊಂದಿದ್ದು ಇದಕ್ಕಾಗಿ ರಚಿಸಲಾಗಿರುವ ಸಮಿತಿಯು ವಾರದಲ್ಲಿ ನೀಲ ನಕ್ಷೆ ಸಿದ್ಧಪಡಿಸಲಿದೆ  ಎಂದು  ಜಲ ಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ತಿಳಿಸಿದರು.
ಕೃಷ್ಣರಾಜಸಾಗರದಲ್ಲಿ ಕಾವೇರಿ ಆರತಿ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು ನಾಡಿನ ಸಂಸ್ಕೃತಿ, ಧಾರ್ಮಿಕ ಆಚರಣೆ ಸೇರಿಸಿ ಕಾರ್ಯಕ್ರಮ ರೂಪಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಮಿತಿಗೆ ಸಲಹೆ ನೀಡಿದ್ದೇನೆ. ಈ ಸಮಿತಿ ಮುಂದಿನ 8-10 ದಿನಗಳಲ್ಲಿ ಕಾರ್ಯಕ್ರಮದ ನೀಲನಕ್ಷೆ ಸಿದ್ಧಪಡಿಸಲಿದೆ ಎಂದು ತಿಳಿಸಿದರು.
ಕೊಡಗಿನಿಂದ ಹಿಡಿದು, ದಕ್ಷಿಣ  ಕನ್ನಡ, ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಚಾಮರಾಜನಗರ ಭಾಗದ ಜನರು ಕಾವೇರಿ ಮಾತೆಗೆ  ನಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಾವೇರಿ ನೀರು ಬಳಸುವ ತಮಿಳುನಾಡಿನ ಜನರೂ ಕೂಡ ಬಂದು ಕಾವೇರಿ ತಾಯಿಗೆ ಪೂಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಕಾವೇರಿ ಆರತಿ ಕಾರ್ಯಕ್ರಮ ವಿನ್ಯಾಸ, ಸ್ವರೂಪ ಸೇರಿದಂತೆ ಇತರೆ ರೂಪುರೇಷೆಗಳ ಅಧಿಕಾರಿಗಳು ಹಾಗೂ  ನಾಯಕರ ಜತೆ ಚರ್ಚೆ ಮಾಡಿದ್ದೇನೆ ಎಂದರು. ಚೆಸ್ಕಾಂ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಇಬ್ಬರು ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಹಾಗೂ ಪರಿಷತ್ ಸದಸ್ಯರು, ಸಿಇಓಗಳು, ಬಿಡ್ಬ್ಲ್ಯೂಎಸ್ಎಸ್ ಬಿ ಮುಖ್ಯಸ್ಥರು ಸೇರಿ ಸಮಿತಿ ರಚಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಲಿದ್ದಾರೆ. ಚೆಸ್ಕಾಂ ಸಂಸ್ಥೆ ದೀಪಾಲಂಕಾರ ವ್ಯವಸ್ಥೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾವೇರಿ ಆರತಿಗೆ ಸರ್ಕಾರ 92 ಕೋಟಿ ನೀಡಲು ತೀರ್ಮಾನಿಸಿದ್ದು, ಇದರ ಜತೆಗೆ ಬೇರೆ ಇಲಾಖೆಗಳು ಅಗತ್ಯ ಸಹಕಾರ ನೀಡಲಿವೆ,ಕನಿಷ್ಠ ಸುಮಾರು 10 ಸಾವಿರ ಜನರು ಕುಳಿತು  ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ಎಷ್ಟು ದಿನ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಸಮಿತಿ ತೀರ್ಮಾನ ಮಾಡಲಿದೆ. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಇಲ್ಲಿನ ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ. ಧಾರ್ಮಿಕ ದತ್ತಿ ಇಲಾಖೆಯವರು ಕಾರ್ಯಕ್ರಮದಲ್ಲಿ ಯಾವ ರೀತಿ ಪೂಜೆ, ವೇದಗೋಷ್ಠಿ ಮಾಡಬೇಕು ಎಂದು ವರದಿ ನೀಡಿದ್ದು, ಎಲ್ಲವನ್ನು ಕ್ರೂಢೀಕರಿಸಿ ಅಂತಿಮ ರೂಪುರೇಷೆ ನೀಡಲಾಗುವುದು. ಈ ವಿಚಾರವಾಗಿ ಯಾವುದಾದರೂ ಸಂಘಟನೆಗಳು ನಮ್ಮ ಜತೆ ಚರ್ಚೆ ಮಾಡಲು ಇಚ್ಛಿಸಿದರೆ ಕರೆದು ಮಾತನಾಡುತ್ತೇವೆ. ಬೇರೆಯವರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕೃಷ್ಣರಾಜಸಾಗರದ  ಬೃಂದಾವನ ಉದ್ಯಾನವನ ಉನ್ನತೀಕರಣಕ್ಕಾಗಿ  ಈಗಾಗಲೇ ಟೆಂಡರ್ ಕರೆಯಲಾಗಿದ್ದು,ಯೋಜನಾ ಪ್ರಾಧಿಕಾರ ಮಾಡಲು ತೀರ್ಮಾನಿಸಿದ್ದು, ನಾಲ್ಕು ಪಂಚಾಯ್ತಿ ಸೇರಿಸಲಾಗುತ್ತಿದೆ. ಪಂಚಾಯ್ತಿಗಳ ಅಸ್ಥಿತ್ವಕ್ಕೆ ತೊಂದರೆ ಆಗುವುದಿಲ್ಲ. ಅವುಗಳು ತಮ್ಮ ಕಾರ್ಯ ಮುಂದುವರಿಸಲಿವೆ. ಅವರ ಅಧಿಕಾರ ಮೊಟಕುಗೊಳಿಸುವುದಿಲ್ಲ. ರಸ್ತೆ, ಪಾರ್ಕ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ಪ್ರಕಾರ ಜಾಗ ನೀಡುವ ಕೆಲಸವನ್ನು ಯೋಜನಾ ಪ್ರಾಧಿಕಾರ ಮಾಡಲಿದೆ. ಇದು ಅಭಿವೃದ್ಧಿ ಪ್ರಾಧಿಕಾರವಲ್ಲ, ಯೋಜನಾ ಪ್ರಾಧಿಕಾರ ಮಾತ್ರ. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಯೋಜನಾ ಪ್ರಾಧಿಕಾರದಂತೆ  ಇರಲಿದೆ. ಇಲ್ಲಿಂದ ಬಂದ ಹಣವನ್ನು ಇಲ್ಲಿನ ಅಭಿವೃದ್ಧಿಗೆ ವಿನಿಯೋಗಿಸಲು ಪ್ರಾಧಿಕಾರ ಯೋಜನೆ ರೂಪಿಸಲಿದೆ ಎಂದರು.
ಬೃಂದಾವನ ಉದ್ಯಾನವನ ಉನ್ನತೀಕರಣಕ್ಕೆ 7 ಸಂಸ್ಥೆಗಳು ಮುಂದಾಗಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಧ್ಯದಲ್ಲೇ ಇದರ ರೂಪುರೇಷೆ ಸಿದ್ಧಪಡಿಸಲಾಗುವುದು. ಈ ಭಾಗದಲ್ಲಿ ಏನೇ ಉದ್ಯೋಗ ಸೃಷ್ಟಿಯಾದರೂ ಈ ಭಾಗದ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ಮೊದಲು ಆದ್ಯತೆ ನೀಡಲು ಷರತ್ತು ಹಾಕಲಾಗಿದೆ. ಸ್ಥಳೀಯ ಯುವಕರಿಗೆ ಈ ಸಂಸ್ಥೆಗಳು ತರಬೇತಿ ನೀಡಿ ಉದ್ಯೋಗ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.
ಕಾವೇರಿ ಆರತಿಯನ್ನು  ದಸರಾ ಜತೆಯಲ್ಲೇ ಮಾಡಲು ತರಾತುರಿಯಲ್ಲಿದ್ದೇವೆ ಈ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಸಮಿತಿ ರೂಪುರೇಷೆಗಳನ್ನು ಎಷ್ಟು ಬೇಗ ನೀಡುತ್ತಾರೋ ನೋಡೋಣ ಕಾವೇರಿ ಆರತಿ ನಡೆಸಲು ಜಾಗ ಪರಿಶೀಲನೆ ಮಾಡಿದ್ದೇನೆ. ಈ ವಿಚಾರವಾಗಿ ತಾಂತ್ರಿಕ ಸಮಿತಿ ಅಭಿಪ್ರಾಯ ಪಡೆಯಲಾಗಿದೆ. ನೀರು ಸಂಗ್ರಹವಿರಬೇಕು, ಅಣೆಕಟ್ಟಿನಿಂದ ಸ್ವಲ್ಪ ದೂರದಲ್ಲಿ ಇರಬೇಕು. ಪಾರ್ಕಿಂಗ್ ವ್ಯವಸ್ಥೆ, ಕಲಾವಿದರು, ಪೂಜೆ ಮಾಡುವವರಿಗೆ ಜಾಗ ಕಲ್ಪಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ಜಾಗ ನಿರ್ಮಿಸಲಾಗುವುದು. ಬೋಟಿಂಗ್ ವ್ಯವಸ್ಥೆ ಜಾಗವೇ ಬೇರೆ, ಈ ಕಾರ್ಯಕ್ರಮದ ಜಾಗವೇ ಪ್ರತ್ಯೇಕವಾಗಿರಲಿದೆ. ಸಮಿತಿಯು ವಿಚಾರವಾಗಿ ತೀರ್ಮಾನ ಮಾಡಲಿದೆ ಎಂದರು.
ಕಾವೇರಿ ಆರತಿಗೆ ಟಿಕೆಟ್ ಕೂಡ ಇರುತ್ತದೆ, ಉಚಿತ ಪ್ರವೇಶ ವ್ಯವಸ್ಥೆಯೂ ಇರುತ್ತದೆ. ಬಡವ ಆರತಿ ನೋಡಲು ಬಂದರೆ ಆತನಿಗೆ ಬೇಡ ಎನ್ನಲು ಸಾಧ್ಯವೇ,ದಸರಾದಲ್ಲಿ ಕೆಲವರು ಟಿಕೆಟ್ ಪಡೆದು ವೀಕ್ಷಣೆ ಮಾಡುತ್ತಾರೆ, ಮತ್ತೆ ಕೆಲವರು ಉಚಿತವಾಗಿ ವೀಕ್ಷಣೆ ಮಾಡುತ್ತಾರೆ. ಅದೇ ರೀತಿ ಇಲ್ಲೂ ವ್ಯವಸ್ಥೆ ಕಲ್ಪಿಸಲಾಗುವುದು, ಸಾರ್ವಜನಿಕರು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಾವೇರಿ ನದಿ ಒತ್ತುವರಿ ಹಾಗೂ ಮಲೀನ ವಿಚಾರವಾಗಿ ಪ್ರತಿಕ್ರಿಯಿಸಿ ಈಗಾಗಲೇ  ಎಲ್ಲಾ ಅಣೆಕಟ್ಟುಗಳನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದೆ. ಅಣೆಕಟ್ಟು ತುಂಬಿದಾಗ ಎಲ್ಲಿಯವರೆಗೆ, ಎಷ್ಟು ಮಟ್ಟದವರೆಗೆ ನೀರು ನಿಲ್ಲಲಿದೆ ಎಂದು ಗುರುತು ಮಾಡಲಾಗಿದೆ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಕೆರೆಗಳ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ಅಣೆಕಟ್ಟಿನ ಆಸ್ತಿ ಮಾಪನ ಮಾಡಲು ಸರ್ವೇ ಇಲಾಖೆಗೂ ಹೇಳಲಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles