ಮಂಡ್ಯ :- ದೇಶದಲ್ಲಿ ಶೋಷಿತರ ಪರ ಹೋರಾಟ ಮಾಡುವ ಯಾವುದೇ ಧರ್ಮ, ಸಂಘಟನೆ, ವ್ಯಕ್ತಿಯನ್ನು ದಮನ ಮಾಡುವ ಪ್ರಯತ್ನ ನಡೆದಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ , ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಇತಿಹಾಸವನ್ನು ನೋಡಿದರೆ ಶೋಷಿತರ ಪರ ಇರುವ ವ್ಯವಸ್ಥೆಯನ್ನು ದಮನ ಮಾಡುವ ನಿರಂತರ ಪ್ರಯತ್ನ ನಡೆದಿದೆ, ಇಂತಹ ದಮನಕಾರಿ ವ್ಯವಸ್ಥೆ ಬೌದ್ಧ ಧರ್ಮ ಮತ್ತು ಲಿಂಗಾಯತ ಧರ್ಮವನ್ನು ಬೆಳೆಯಲು ಬಿಟ್ಟಿಲ್ಲ, ಸಮಾನತೆ ಸಂದೇಶ ಸಾರುವ ಬಸವಣ್ಣರ 22,000 ವಚನಗಳಲ್ಲಿ 2000 ಮಾತ್ರ ಉಳಿದಿವೆ, ವಚನಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ, ಇತಿಹಾಸ ಅರಿಯದವರು ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿಲ್ಲ ಹಾಗಾಗಿ ಇದರ ಬಗ್ಗೆ ಸತ್ಯಶೋಧನ ಮಾಡಬೇಕಾಗಿದೆ ಎಂದರು.
ದೇಶದಲ್ಲಿ ಹುಟ್ಟಿದ ಬೌದ್ಧ ಧಮ್ಮವನ್ನು ಬೆಳೆಯಲು ಬಿಡಲಿಲ್ಲ, ಇಷ್ಟೊತ್ತಿಗೆ ಬುದ್ಧನ ಸಂದೇಶ ಪ್ರತಿ ಮನೆ ಮನೆಗೆ ತಲುಪಬೇಕಿತ್ತು ಆದರೆ ಅದು ಬೆಳೆಯದಂತೆ ತೊಂದರೆ ಕೊಟ್ಟಿದ್ದಾರೆ, ವಿದೇಶಗಳಲ್ಲಿ ದೊಡ್ಡ ಮಟ್ಟಕ್ಕೆ ಬೌದ್ಧ ಧಮ್ಮ ಬೆಳವಣಿಗೆ ಕಂಡಿದ್ದರಿಂದ ಆ ರಾಷ್ಟ್ರಗಳೆಲ್ಲ ಪ್ರಗತಿ ಹೊಂದಿವೆ, ಭಾರತದಲ್ಲಿ ಬೌದ್ಧ ಧಮ್ಮ ಬೆಳವಣಿಗೆಯಾಗಿದ್ದರೆ ಆ ಮಟ್ಟದ ಪ್ರಗತಿಯನ್ನು ಕಾಣಬಹುದಿತ್ತು ಎಂದರು.
ನಾಲ್ಕು ಸಾವಿರ ವರ್ಷಗಳ ಹಿಂದಿನಿಂದಲೂ ಶೋಷಿತರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ, ಇದೀಗ ಸಂವಿಧಾನ ಬದಲಾವಣೆ ಮಾಡುವ ವಿಚಾರವನ್ನು ಹರಿಯಬಿಟ್ಟಿದ್ದಾರೆ, ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ, ಪ್ರತಿಯೊಂದು ವರ್ಗದ ಜನತೆ ಸಂವಿಧಾನದ ಲಾಭ ಪಡೆಯುತ್ತಿದ್ದಾರೆ ಆದರೆ ಸಂವಿಧಾನಕ್ಕೆ ಸಂಕಷ್ಟ ಎದುರಾದಾಗ ಶೋಷಿತ ಸಮುದಾಯಗಳು ಮಾತ್ರ ಬೀದಿಗೆ ಇಳಿದು ಹೋರಾಟ ಮಾಡುತ್ತಿವೆ, ಸಂವಿಧಾನ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಸವಲತ್ತುಗಳನ್ನು ಕಲ್ಪಿಸಿದೆ ಎಂಬುದನ್ನು ಎಲ್ಲರಲ್ಲೂ ಅರಿವು ಮೂಡಿಸಬೇಕು, ಸಂವಿಧಾನ ರಕ್ಷಣೆಗೆ ಎಲ್ಲರೂ ಸಹ ಮುಂದಾಗುವವರೆಗೂ ಜಾಗೃತಿ ಮೂಡಿಸಬೇಕೆಂದರು.
ದೇಶದ ಶೋಷಿತರನ್ನು ಶಿಕ್ಷಣ ಸೇರಿದಂತೆಎಲ್ಲದರಲ್ಲೂ ವಂಚಿಸುತ್ತಾ ಬರುತ್ತಿರುವ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ, ಶೋಷಿತರ ಸಂಘರ್ಷ ಇದುವರೆಗೂ ತಪ್ಪಿಲ್ಲ ಸಮಾನತೆ ಸಂದೇಶ ಸಾರಿದ ಬುದ್ಧ ಬಸವಣ್ಣ ಅಂಬೇಡ್ಕರ್ ಮಾರ್ಗದಲ್ಲಿ ಮುನ್ನಡೆಯುವುದು ಅತ್ಯವಶ್ಯಕವಾಗಿದೆ ಆ ಮೂಲಕ ಸಂಘರ್ಷ ಕೊನೆಗೊಳ್ಳಬೇಕು ಸಮಾನತೆ ಕಾಣಬೇಕಾಗಿದೆ ಎಂದು ಹೇಳಿದರು.
ಬುದ್ಧನ ಸಂದೇಶ ಎಲ್ಲರ ಗುರಿಯಾಗಿರಲಿ, ಸಂವಿಧಾನ ರಕ್ಷಣೆಗೆ ಬದ್ಧರಾಗಿರಿ, ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಮುನ್ನಡೆ ಬೇಕಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪರಿಶಿಷ್ಟರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಬೌದ್ಧ ವಿಹಾರ ಸ್ಥಾಪಿಸಬೇಕೆಂಬ ಆಶಯ ಎಲ್ಲರದ್ದಾಗಿದೆ, ಗುಲ್ಬರ್ಗದಲ್ಲಿ ಅತಿ ದೊಡ್ಡದಾದ ಬೌದ್ಧ ವಿಹಾರ ಸ್ಥಾಪನೆ ಮಾಡಲಾಗಿದೆ ಉತ್ತರದಲ್ಲಿ ಇರುವ ಬೌದ್ಧ ವಿಹಾರ ಮಾದರಿ ದಕ್ಷಿಣದಲ್ಲಿಯೂ ಆಗಲಿ, ಮಂಡ್ಯ ಜಿಲ್ಲೆಯಲ್ಲಿ ಬೌದ್ಧ ವಿಹಾರ ಸ್ಥಾಪನೆಯಾಗಲಿ, ಅದಕ್ಕೆ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಬುದ್ಧನ ತತ್ವ ಸಿದ್ಧಾಂತಗಳು ಎಲ್ಲರಿಗೂ ಮಾದರಿ, ಬುದ್ಧನ ಸಂದೇಶ ಸಾರುವ ಸಮ್ಮೇಳನ ನಿರಂತರವಾಗಿ ನಡೆಯಲಿ, ವಿಶ್ವದ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ಬೃಹದಾಕಾರವಾಗಿ ಬೆಳೆದಿದೆ, ಆದರೆ ದೇಶದಲ್ಲಿ ಅದರ ಬೆಳವಣಿಗೆಗೆ ಅವಕಾಶ ನೀಡದೆ ತೊಂದರೆ ನೀಡಿರುವ ಇತಿಹಾಸ ಕಣ್ಮುಂದೆ ಇದೆ ಎಂದರು.
ದೇಶ ಆಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಾವಿನ ಮನೆಯಲ್ಲಿಯೂ ರಾಜಕಾರಣ ಮಾಡುತ್ತಾರೆ, ಉಗ್ರರ ಅಟ್ಟಹಾಸದಿಂದ ಅಮಾಯಕ ಜನ ಸಾವನ್ನಪ್ಪಿದರೂ ಸಹ ಅವರಿಗೆ ಚುನಾವಣೆ ಮುಖ್ಯವಾಗಿದೆ, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ನಡೆದಾಗ ಪ್ರಧಾನಿಗಳ ವರ್ತನೆಯನ್ನು ನೀವೆಲ್ಲರೂ ಗಮನಿಸಿದ್ದೀರಿ, ದೇಶದಲ್ಲಿ ಸಹೋದರತೆ, ಪ್ರೀತಿ ವಿಶ್ವಾಸದ ಬದುಕು ಮುಖ್ಯ ಹೆಣದ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ ಅವೆಲ್ಲ ತಾತ್ಕಾಲಿಕ, ನೀವೆಲ್ಲರೂ ಒಗ್ಗೂಡಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪಾಠ ಕಲಿಸಿ ಎಂದು ಹೇಳಿದರು.