ಮಂಡ್ಯ :- ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ( ಮೂಲ ಸಂಘಟನೆ ) ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಂಘದ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ನಮ್ಮೂರಿಸಿರುವುದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ, ಕೂಡಲೇ ಹೆಸರು ಒತ್ತಾಯಿಸಿದರು.
ಭತ್ತ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಖರೀದಿ ಮಾಡುವ ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕೇಂದ್ರದ ದರದ ಜೊತೆಗೆ ರಾಜ್ಯ ಸರ್ಕಾರ 700 ರೂ ಪ್ರೋತ್ಸಾಹ ಧನ ನೀಡಬೇಕು, ಭತ್ತ ಕಟಾವು ಯಂತ್ರದ ಬಾಡಿಗೆದರ ದುಬಾರಿ ಯಾಗಿರುವುದರಿಂದ ಕೃಷಿ ಇಲಾಖೆ ಏಕದರ ನಿಗದಿ ಮಾಡಬೇಕು, ಬೇಸಿಗೆ ಬೆಳೆ ಒಣಗದಂತೆ ಕೆ ಆರ್ ಎಸ್ ಅಣೆಕಟ್ಟೆಯಿಂದ ನೀರು ಹರಿಸಲು ಮುಂದಾಗಬೇಕು, ಅರ್ಧಕ್ಕೆ ಸ್ಥಗಿತಗೊಂಡಿರುವ ವಿ ಸಿ ನಾಲೆ ಕಾಮಗಾರಿ ಪೂರ್ಣಗೊಳಿಸಬೇಕು, ಜೊತೆಗೆ ಉಪಕಾಲದಗಳನ್ನು ದುರಸ್ತಿಗೊಳಿಸಿ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಎಫ್ ಆರ್ ಪಿ ದರವನ್ನು ಕಬ್ಬು ಆಧಾರಿತ ಉಪ ಉತ್ಪನ್ನಗಳ ಬೆಲೆಗಳ ಆಧಾರದ ಮೇಲೆ ಪ್ರತಿ ಟನ್ ಗೆ 4500 ರೂ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲಾತಿ ಒದಗಿಸಲು ರೈತರಿಗೆ ಕಷ್ಟವಾಗುತ್ತಿರುವುದರಿಂದ ದಾಖಲಾತಿ ಸರಳಿಕರಣ ಮಾಡಿ ಪುಣ್ಯ ಬಡ್ಡಿ ದರದಲ್ಲಿ 10 ಲಕ್ಷ ರೂ ವರೆಗೆ ಬೆಳೆ ಸಾಲ ನೀಡಲು ಮುಂದಾಗಬೇಕು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರು,ಸ್ತ್ರೀ ಶಕ್ತಿ ಮತ್ತು ಮಹಿಳಾ ಸಂಘಗಳ ಸದಸ್ಯರ ಆಧಾರ್ ಕಾರ್ಡ್ ಆಧಾರವಾಗಿಟ್ಟುಕೊಂಡು ಸಾಲ ನೀಡುತ್ತಿದ್ದು ಇದರಿಂದ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗದ ಹಲವರು ಆತ್ಮಹತ್ಯೆಗೆ ಶರಣಾಗುತ್ತಿರುವುದರಿಂದ ಮೈಕ್ರೋ ಫೈನಾನ್ಸ್ ಸಾಲ ವಸೂಲಿದಾರರು ಹಾಗೂ ಮುಖ್ಯಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಹರಿಯಾಣದ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಈ ಕೂಡಲೇ ರೈತರ ಬೇಡಿಕೆಗಳಾದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ, ಡಾ.ಎಂ ಎಸ್ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ, ರೈತರ ಸಂಪೂರ್ಣ ಸಾಲಮನ್ನಾ, ಫಸಲ್ ಭೀಮ ಬೆಳ ವಿಮೆ ಪದ್ಧತಿ ನೀತಿ ಬದಲಾವಣೆ, 60 ವರ್ಷ ಪೂರೈಸಿದ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕಾರ್ಯದರ್ಶಿ ಎಸ್ ಮಂಜೇಶ್ ಗೌಡ, ಉಪಾಧ್ಯಕ್ಷ ಕೆ ನಾಗೇಂದ್ರ ಸ್ವಾಮಿ, ಸೋ ಶಿ ಪ್ರಕಾಶ್, ಎಚ್ ಜೆ ಪ್ರಭುಲಿಂಗು, ಎಲ್ ಸುರೇಶ್, ಬಸವರಾಜು, ಕೆ ಜೆ ಉಮೇಶ್, ಅಣ್ಣೂರು ಮಹೇಂದ್ರ ನೇತೃತ್ವ ವಹಿಸಿದ್ದರು.