ಮಂಡ್ಯ :- ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ನಿರಂತರ ಕಿಡಿ ಕಾರುತ್ತಿರುವ ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾತಿಗೆ ಕಡಿವಾಣ ಹಾಕುವಂತೆ ಪಕ್ಷದ ಕಾರ್ಯಕರ್ತರು ಹೈಕಮಾಂಡ್ ಮೊರೆ ಹೋಗಿದ್ದಾರೆ.
ನಗರದ ಅಂಚೆ ಕಚೇರಿಯಲ್ಲಿ ಬಿ ಎಸ್ ಯಡಿಯೂರಪ್ಪ ನಿಷ್ಠರು ಕೇಂದ್ರ ಸಚಿವ ಅಮಿತ್ ಶಾ ಗೆ ರಕ್ತದಲ್ಲಿ ಬರೆದಿರುವ ಪತ್ರವನ್ನು ರವಾನಿಸುವ ಮೂಲಕ ಯತ್ನಾಳ್ ವಿರುದ್ಧ ಹೈಕಮಾಂಡ್ ಕದ ತಟ್ಟಿದ್ದಾರೆ.
ಬಸವನಗೌಡ ಯತ್ನಾಳ್ ವಕ್ಸ್ ಬೋರ್ಡ್ ವಿಚಾರವಾಗಿ ಹೋರಾಟ ಮಾಡುತ್ತಿರುವುದು ಸರಿಯಷ್ಟೆ ಆದರೆ ಅವರ ಹೋರಾಟ ಕಾಂಗ್ರೆಸ್ ಪಕ್ಷದ ಪರವಾಗಿಯೋ ಅಥವಾ .ಬಿ.ಎಸ್.ಯಡಿಯೂರಪ್ಪ ಬಿ.ವೈ.ವಿಜೇಂದ್ರ ರವರ ವಿರುದ್ದವೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಯತ್ನಾಳ್ ಅವರ ಮಾತಿಗೆ ಕಡಿವಾಣ ಅಥವಾ ಬಾಯಿಗೆ ಬೀಗ ಹಾಕದಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಅಲ್ಲದೆ ಕಾರ್ಯಕರ್ತರ ಮನಸ್ಸಿನಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡಲಿದೆ ಅದೇ ರೀತಿ ಬಿಎಸ್ ವೈ ಅಭಿಮಾನಿಗಳ ಮನಸ್ಸಿಗೆ ನೋವಾಗುತ್ತಿದೆ ಎಂದಿದ್ದಾರೆ.
ಯತ್ನಾಳ್ ನಡವಳಿಕೆಗೆ ಕಡಿವಾಣ ಹಾಕದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಪಕ್ಷದ ವರಿಷ್ಠರೇ ಹೊಣೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.
ಪಕ್ಷದ ಕಾರ್ಯಕರ್ತರಾದ ಶಿವಕುಮಾರ ಆರಾಧ್ಯ, ನಂಜುಂಡಸ್ವಾಮಿ, ಹೊಸಳ್ಳಿ ಶಿವು, ಪ್ರಸನ್ನ ಕುಮಾರ್, ಎಚ್ ಕೆ ಮಂಜುನಾಥ್, ವಿ ನಾಗರಾಜು ಇತರರಿದ್ದರು.