2.3 C
New York
Friday, December 20, 2024

Buy now

spot_img

ನುಡಿ ಹಬ್ಬ l ಸಮ್ಮೇಳನಾಧ್ಯಕ್ಷರ ವೈಭವದ ಮೆರವಣಿಗೆ

ಮಂಡ್ಯ :- ಮೂರು ದಶಕಗಳ ನಂತರ ಸಕ್ಕರೆ ನಗರಿ ಮಂಡ್ಯದಲ್ಲಿ ಸಾಹಿತ್ಯ ಸಂಭ್ರಮ ಮನೆ ಮಾಡಿದ್ದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು
ಅಲಂಕೃತ ಕನ್ನಡ ರಥದಲ್ಲಿ ವಿರಾಜಮಾನರಾಗಿ ಆಸೀನರಾಗಿದ್ದ  ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು  ಚನ್ನಬಸಪ್ಪ ನುಡಿ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದರು,
ಸಾಹಿತ್ಯದ ಸೊಗಡು, ಕನ್ನಡದ ವೈಭವ, ಜಾನಪದ ಕಲಾತಂಡಗಳ ಮೆರಗು, ಕವಿ ಸಾಹಿತಿಗಳ ಅಲಂಕೃತ ಭಾವಚಿತ್ರ,ಕನ್ನಡ ಕಲರವ, ವಿದ್ಯಾರ್ಥಿಗಳ ಕನ್ನಡ ಪ್ರೇಮ, ಪೊಲೀಸ್ ಬ್ಯಾಂಡ್, ಅಲಂಕೃತ ಎತ್ತಿನಗಾಡಿಗಳ ಸೊಗಸು, ಅಧಿಕಾರಿಗಳ ಮಂದಹಾಸ, ಕನ್ನಡಪರ ಸಂಘಟನೆ ಮತ್ತು ಸಾಹಿತ್ಯಾಸಕ್ತರ  ಸಂಭ್ರಮ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.
ನಗರದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ  ಸಮ್ಮೇಳನ ಅಧ್ಯಕ್ಷರ ಜೊತೆ ನಗಾರಿ ಬಾರಿಸಿ ಹಲ್ಮಿಡಿ ಶಾಸನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆಯಿತು.ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ,ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ, ಜಿಲ್ಲೆಯ ಶಾಸಕರು ಹಾಜರಿದ್ದು ಶುಭ ಹಾರೈಸಿದರು.
ಸಮ್ಮೇಳನಾಧ್ಯಕ್ಷ ಗೊ ರು ಚನ್ನಬಸಪ್ಪರನ್ನು ಅಲಂಕೃತ ಕನ್ನಡ ರಥದಲ್ಲಿ ಕೂರಿಸಿ ಮೈಸೂರು ಪೇಟ ತೊಡಿಸಿ ಶಾಲು ಓದಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಿದರು, ಸಾಹಿತ್ಯದ ತೇರಿನಲ್ಲಿ ಸಮ್ಮೇಳನಾಧ್ಯಕ್ಷರು ವಿರಾಜಮಾನರಾಜ ರಾಗುತ್ತಿದ್ದಂತೆ ಪೊಲೀಸ್ ಬ್ಯಾಂಡ್ ನುಡಿಸಲಾಯಿತು, ಕನ್ನಡಾಂಬೆ, ಜೈ ಭುವನೇಶ್ವರಿ ಮಾತೆಗೆ ಜಯ ಘೋಷ ಮೊಳಗಿಸಿ  ಜಾನಪದ ಕಲಾ ತಂಡಗಳ ಸದ್ದಿನೊಂದಿಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಆಕರ್ಷಕ ಮೆರವಣಿಗೆ ಸಾಗಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕವಿ ಮತ್ತು ಸಾಹಿತಿಗಳ ಅಲಂಕೃತ ಭಾವಚಿತ್ರ ಹೊತ್ತ ಆಟೋಗಳು ಮಹನೀಯರ ವೇಷದಾರಿಗಳು  ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾದವು, ವಿದ್ಯಾರ್ಥಿಗಳು ಸಮ್ಮೇಳನಾಧ್ಯಕ್ಷರಿಗೆ ಪುಷ್ಪಾರ್ಚನೆ ಮಾಡಿ ವಂದಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಕನ್ನಡ ಪ್ರೇಮ ಮೆರೆದರೆ ಜಾನಪದ ತಂಡಗಳು ಕಲೆ ಪ್ರದರ್ಶಿಸಿ ಮೆರಗು ನೀಡಿದವು,
ಸಾಹಿತ್ಯಾಸಕ್ತರು, ಕನ್ನಡ ಪ್ರೇಮಿಗಳು, ಕನ್ನಡದ ಕಟ್ಟಾಳುಗಳು ಕನ್ನಡ ಬಾವುಟ ಹಿಡಿದು ಹಾಗೂ ಶಾಲು ಹೊದ್ದು ಭಾಷಾ ಪ್ರೇಮ ಬಿಂಬಿಸಿದರೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕನ್ನಡದ ಕಲರವ ಅನಾವರಣಗೊಂಡಿತು.
ಮೂರು ತಾಸು ಸುಮಾರು ಐದು ಕಿಲೋಮೀಟರ್ ಸಾಗಿದ  ಮೆರವಣಿಗೆ ವರ್ಣಮಯವಾಗಿತ್ತು,
ಮೆರವಣಿಗೆಯಲ್ಲಿ ಜಾನಪದ ತಂಡಗಳಾದ ನಂದಿಧ್ವಜ, ಚಕ್ಕಡಿಗಾಡಿ, ಕೊಂಬುಕಹಳೆ, ನಾದಸ್ವರ, ಸ್ತಬ್ಧಚಿತ್ರ, ವೀರಗಾಸೆ, ತಮಟೆ, ಕಂಸಾಳೆ, ಮಹಿಳಾ ವೀರಗಾಸೆ, ಕೀಲುಕುದುರೆ, ಜಗ್ಗಲಿಗೆ ಮೇಳ, ಪೂರ್ಣಕುಂಭ, ನಗಾರಿ, ಛತ್ರಿಚಾಮರ, ಲಿಡಕರ್ ಸ್ತಬ್ಧಚಿತ್ರ, ಖಾಸಬೇಡರಪಡೆ, ಭಾಗವಂತಿಕೆ, ಹಗಲು ವೇಷ, ಅರೆವಾದ್ಯ, ಪೆಟ್ಟಿಗೆ ಮಾರಮ್ಮ, ಕೋಲಾಟ, ಗಾರುಡಿಗೊಂಬೆ, ಕರಗ, ಚಿಲಿಪಿಲಿ ಗೊಂಬೆ, ದಾಸಪ್ಪ ಜೋಗಪ್ಪ, ಬೆಂಕಿಭರಾಟೆ, ದೊಣ್ಣೆ ವರಸೆ, ಚಿಟ್ಟಲಗಿ ಮೇಳ, ಷಹನಾಯವಾದನ, ಗಾರುಡಿ ಗೊಂಬೆ, ಯಕ್ಷಗಾನ ಗೊಂಬೆ, ವಾನರಸೇನೆ, ಕರಡಿ ಮಜಲು, ದೇವಿ ವೇಷಧಾರಿ, ಕೀಲು ಕುದುರೆ, ನೃತ್ಯ, ಮರಗಾಲು, ಮುಳ್ಳು ಕುಣಿತ, ಡೊಳ್ಳು ಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಪಟಕುಣಿತ, ರಂಗದಕುಣಿತ, ಮಹಿಳಾ ಡೊಳ್ಳು ಕುಣಿತ, ಸೋಮನ ಕುಣಿತ, ಗೊರವರ ಕುಣಿತ, ಲಂಬಾಣಿ ನೃತ್ಯ, ಕೋಳಿ ನೃತ್ಯ, ಕೊಡವ ನೃತ್ಯ, ಜೋಗತಿ ನೃತ್ಯ,  ವೀರಮಕ್ಕಳ ಕುಣಿತ, ಸತ್ತಿಗೆ ಕುಣಿತ,  ದಟ್ಟಿ ಕುಣಿತ,  ಹಲಗು ಕುಣಿತ, ಪಟಕುಣಿತ  ಮೂಲಕನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ, ವಿಶ್ವೇಶ್ವರಯ್ಯ ವೇಷಧಾರಿ, ಅಶ್ವಾರೋಹಿ ದಳ, ಟಾಂಗಾ ಗಾಡಿ, ಎತ್ತಿನ ಗಾಡಿ, ಸಮ್ಮೇಳನಾಧ್ಯಕ್ಷರ ಭಾವಚಿತ್ರ ಒಳಗೊಂಡ 87 ಆಟೋ ರಿಕ್ಷಾಗಳು, ಸ್ಕೌಟ್ಸ್ ಮತ್ತು ಗೈಟ್ಸ್, ಎನ್ ಸಿಸಿ, ಭಾರತ್ ಸೇವಾದಳ ಸಾಗುವ ಮೂಲಕ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ವಿಶೇಷ  ಆಕರ್ಷಣೆ ನೀಡಿದವು.
ತಮಿಳುನಾಡಿನ ಕರಗಂ, ಒಡಿಶಾದ ಸಂಬಲ್ಪುರಿ ಮತ್ತು ಧಾಪ್ ಬುಡಕಟ್ಟು ನೃತ್ಯ, ಮಧ್ಯಪ್ರದೇಶದ ಬಧಾಯಿ ಮತ್ತು ನೋರಾ  ಕಲಾತಂಡಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜನಾಕರ್ಷಿಸಿದವು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles