ಮಂಡ್ಯ :-ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಕೇಂದ್ರ ಸಂಪುಟದಿಂದ ವಜಾ ಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ಕೇಂದ್ರ ಸಚಿವ ಅಮಿತ್ ಶಾ ಹಾಗೂ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಸಂಸತ್ ನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ.ಆರ್,ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಬಹಿರಂಗವಾಗಿ ಹೇಳಿದ್ದಾರೆ. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ದೇಶದ್ರೋಹದ ಕೆಲಸವಾಗಿದೆ,ದೇಶದ ಆಸ್ತಿಯಾದ ಅಂಬೇಡ್ಕರ್ ಅವರು ಸರ್ವ ಸಮಾಜಕ್ಕೂ ಸಾಮಾಜಿಕ ನ್ಯಾಯ ಸಿಗುವ ರೀತಿಯ ಸಂವಿಧಾನ ರಚಿಸಿದ್ದು, ಇದರಿಂದ ಮೇಲ್ವರ್ಗದಿಂದ ತಳವರ್ಗದವರೆಗೂ ಎಲ್ಲರಿಗೂ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ಸಿಕ್ಕಿದೆ. ಇದನ್ನು ಅರಿಯದ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವ ಹೇಳನ ಮಾಡಿರುವುದು ತಲೆ ತಗ್ಗಿಸುವ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರು ಕೂಡ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆ ಇದೇ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಅವರ ಹಿಂಬಾಲಕರಾದ ಅಮಿತ್ ಶಾ ಇದೀಗ ಅಂಬೇಡ್ಕರ್ ಹೆಸರು ಹೇಳುವುದನ್ನು ಫ್ಯಾಷನ್ ಎಂದು ಕರೆಯುವ ಮೂಲಕ ಅಂಬೇಡ್ಕರ್ ಕುರಿತು ಆರ್.ಎಸ್.ಎಸ್.ನ ಆಂತರ್ಯದಲ್ಲಿರುವ ಅಸಹನೆಯನ್ನು ಹೊರ ಹಾಕಿದ್ದಾರೆ,ಪ್ರಜಾಪ್ರಭುತ್ವದ ದೇವಾಲಯ ಸಂಸತ್ ನಲ್ಲಿ ನಿಂತು ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸ್ಥಾನ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕು ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಸಂಬದ್ಧ ಬಳಕೆ ಮಾಡಿರುವ ಸಿ.ಟಿ.ರವಿ ಅವರನ್ನು ವಿಧಾನಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಿ ಡಿ ಗಂಗಾಧರ್, ಕಾರ್ಯಾಧ್ಯಕ್ಷ ಎಂ ಸಿ ಚಿದಂಬರ್, ಸಿ ಎಂ ದ್ಯಾವಪ್ಪ,ಅಂಜನಾ ಶ್ರೀಕಾಂತ್,ವಿಜಯಲಕ್ಷ್ಮಿ ರಘುನಂದನ್, ವಿಜಯ್ ಕುಮಾರ್ ಚಂದಗಾಲು, ಸುರೇಶ್ ಕಂಠಿ, ತಗ್ಗಳ್ಳಿ ಯಶೋದ, ಎಂ ಎಲ್ ಸುರೇಶ್, ನಗರಸಭೆ ಸದಸ್ಯ ಶ್ರೀಧರ್, ಕೆಎನ್ ದೀಪಕ್, ಎಸ್ ಬಿ ದೇವರಾಜು,ಪ್ರಕಾಶ್ ಮಲ್ಲೇನಹಳ್ಳಿ, ಶಕುಂತಲಾ ನೇತೃತ್ವ ವಹಿಸಿದ್ದರು.