-4.7 C
New York
Thursday, January 9, 2025

Buy now

spot_img

ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟನೆ

ಮಂಡ್ಯ :- ಭತ್ತ ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ರೈತ ವಿರೋಧಿ ನೀತಿ  ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮಂಡ್ಯದಲ್ಲಿ ಕೃಷಿ ಸಚಿವರ ಕಚೇರಿ ಎದುರು ಭತ್ತ ಸುರಿದು ಪ್ರತಿಭಟಿಸಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರಿನಿಂದ   ಮೆರವಣಿಗೆ ಹೊರಟ ಸಂಘದ ಕಾರ್ಯಕರ್ತರು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕೃಷಿ ಸಚಿವರ ಕಚೇರಿಗೆ ಪ್ರತಿಭಟನಾಕಾರರು ಹೋಗಲು ಮುಂದಾದಾಗ ಗೇಟ್ ಮುಚ್ಚಿ ತಡೆದ ಪೊಲೀಸರನ್ನು ಬೇಧಿಸಿ ಒಳ ನುಗ್ಗಿ ಭತ್ತ ಬಡಿದು ಆಕ್ರೋಶಿಸಿದಾಗ ಗದ್ದಲದ ಪರಿಸ್ಥಿತಿ ಉಂಟಾಯಿತು, ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಿಸಿ ಹೊರಭಾಗಕ್ಕೆ ಕಳುಹಿಸಿದರು, ಆದರೆ ಬ್ಯಾನರ್ ಅಡ್ಡಲಾಗಿ ಹಿಡಿದ ಬಗ್ಗೆ ಸಬ್ ಇನ್ ಸ್ಪೆಕ್ಟರ್ ಆಕ್ಷೇಪ ವ್ಯಕ್ತಪಡಿಸಿದಾಗ ಪ್ರತಿಭಟನಾ ಕಾರರು ಅವರ ವಿರುದ್ಧ ತಿರುಗಿ ಬಿದ್ದು ಪೊಲೀಸ್ ದೌರ್ಜನ್ಯದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.
ಅನಂತರ ಭತ್ತವನ್ನು ಸುರಿದು ಮುಖ್ಯಮಂತ್ರಿ, ಕೃಷಿ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಅತಿ ತುರ್ತಾಗಿ ಭಕ್ತ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿದರು.
ರೈತರು ಜೂನ್ ಮತ್ತು ಜುಲೈನಲ್ಲಿ ನಾಟಿ ಮಾಡಿದ ಭತ್ತ ನವೆಂಬರ್ ನಿಂದ ಕಟಾವು ಮಾಡುತ್ತಿದ್ದಾರೆ, ಈಗಾಗಲೇ ಭತ್ತದ ಕಟಾವು ಅಂತಿಮ ಹಂತಕ್ಕೆ  ಬಂದಿದೆ ಆದರೂ ಸಹ ಭತ್ತದ ಖರೀದಿ ಕೇಂದ್ರವನ್ನು ತೆರೆದಿಲ್ಲ, ಇದರಿಂದ ಸಂಕಷ್ಟಕ್ಕೆ ಸಲುಕಿದ ರೈತ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡ ದಳ್ಳಾಳಿಗಳು ಪ್ರತಿ ಕ್ವಿಂಟಾಲ್ ಭತ್ತವನ್ನು  ಕೇವಲ 1800 ರೂ ಗೆ ಖರೀದಿ ಮಾಡುತ್ತಿದ್ದಾರೆ, ಕನಿಷ್ಠ ಬೆಂಬಲ ಬೆಲೆ 2300 ರೂ ಇದ್ದರೂ ಸಹ ಕಡಿಮೆ ಬೆಲೆಗೆ ಖರೀದಿಸಿ ರೈತರನ್ನು ವಂಚಿಸಲಾಗುತ್ತಿದೆ ಎಂದರು.
ಕೃಷಿ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ಸಹ ಅವರಿಗೆ ರೈತರ ಸಂಕಷ್ಟ ಅರಿತಿಲ್ಲ, ರೈತರ ಹಿತ ಕಾಪಾಡದೆ ಅಸಮರ್ಥರಾಗಿದ್ದಾರೆ, ರೈತರಿಗೆ ದ್ರೋಹ ಮಾಡುವ ಮೂಲಕ ಜಿಲ್ಲೆಗೆ ಕಳಂಕ ತಂದಿದ್ದಾರೆ, ಸಚಿವರಿಗೆ ರೈತರು ಯಾವಾಗ ಭತ್ತದ ಬೆಳೆ ನಾಟಿ ಮಾಡುತ್ತಾರೆ, ಕಟಾವು ಯಾವಾಗ ಮಾಡುತ್ತಾರೆ ಎಂಬ ಕನಿಷ್ಠ ಜ್ಞಾನ ಇಲ್ಲವೇ ಎಂದು ಆಕ್ರೋಶಿಸಿದರು.
ಜಿಲ್ಲೆಯಲ್ಲಿ ಸುಮಾರು 1,50,000 ಎಕರೆಯಲ್ಲಿ  ಪ್ರದೇಶದಲ್ಲಿ  ಭತ್ತ ಬೆಳೆಯಲಾಗಿದ್ದು, ಸುಮಾರು 50 ಲಕ್ಷ ಕ್ವಿಂಟಾಲ್ ಭತ್ತ ಸಂಗ್ರಹವಾಗಿದೆ, ಆದರೆ ನಿಗದಿತ ಸಮಯದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1ಸಾವಿರ ರೂ ನಷ್ಟ ಉಂಟಾಗಿ ಜಿಲ್ಲೆಯ ರೈತರಿಗೆ 250 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯವರೇ ಕೃಷಿ ಮಂತ್ರಿ ಯಾಗಿದ್ದರೂ ಅವರು ಹುಸಿ ಮಂತ್ರಿ ಯಾಗಿದ್ದಾರೆ,ಚಂಡಮಾರುತದಿಂದ ಅಕಾಲಿಕ ಮಳೆ ಯಿಂದ ಭತ್ತ ಬೆಳೆಗಾರರು ನಷ್ಟಕೆ ಒಳಗಾಗಿರುವ ಸಂದರ್ಭದಲ್ಲಿ  ಜಿಲ್ಲಾಡಳಿತ ತಹಸಿಲ್ದಾರ್, ಕೃಷಿ ಇಲಾಖೆ ಮೂಲಕ ಸಮೀಕ್ಷೆ ನಡೆಸಿ ನಷ್ಟದ ವರದಿ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡಿಲ್ಲ ಆಳುವ ಸರ್ಕಾರ ಈ ಕೂಡಲೇ ಭತ್ತದ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಬೇಕು, ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 3000 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು,ಕೇರಳದ ಎಡರಂಗ ಸರ್ಕಾರದ ಮಾದರಿಯಲ್ಲಿ ಪ್ರತಿ  ಎಕರೆಗೆ 10,000 ಪ್ರೋತ್ಸಾಹ ಧನ, ಹೆಚ್ಚುವರಿಯಾಗಿ  ಬೆಂಬಲ ಬೆಲೆಯ ಜೊತೆಗೆ ಕ್ವಿಂಟಾಲ್ ಗೆ 700 ರೂ ನೀಡಬೇಕು.ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವ ಖಾಸಗಿ ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು,ಚಂಡಮಾರುತದ ಮಳೆಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಕುಮಾರ ರವರು ಭತ್ತ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ, ಈಗಾಗಲೇ ಭತ್ತ ಖರೀದಿ ಕೇಂದ್ರ ಗುರುತಿಸಲಾಗಿದೆ, ಶೀಘ್ರದಲ್ಲಿ ಕೇಂದ್ರ ತೆರೆದು ಭತ್ತ ಖರೀದಿ ಮಾಡಲಾಗುವುದು ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್ ಭರತ್ ರಾಜ್, ಸಹ ಸಂಚಾಲಕ ಎನ್ ಲಿಂಗರಾಜಮೂರ್ತಿ, ಮಹಾದೇವ ಎಂ ಇ, ಸತೀಶ್,  ಕುಳ್ಳೇಗೌಡ,ಗುರುಸ್ವಾಮಿ, ಶ್ರೀನಿವಾಸ್, ರಾಮಣ್ಣ, ಎ ಎಲ್ ಶಿವಕುಮಾರ್  ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles